ಹರ್ಯಾಣ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ಕನಿಷ್ಠ ಇಬ್ಬರು ಕಾರ್ಮಿಕರು ಸಜೀವ ದಹನ
photo: PTI
ನೂಹ್,ಜ.18: ಹರ್ಯಾಣದ ನೂಹ್ ಜಿಲ್ಲೆಯ ಕುಂಡಲಿ-ಮಾನೆಸರ್-ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ವೇನಲ್ಲಿ ರವಿವಾರ ಬೆಳಗ್ಗೆ ಐದು ಭಾರೀ ಗಾತ್ರದ ವಾಹನಗಳು ಒಂದಕ್ಕೊಂದು ಢಿಕ್ಕಿ ಹೊಡೆದು ಸಂಭವಿಸಿದ ಅವಘಡದಲ್ಲಿ ಕನಿಷ್ಠ ಇಬ್ಬರು ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ. ಈ ಅವಘಡದಿಂದಾಗಿ ಉಂಟಾದ ಭಾರೀ ಬೆಂಕಿಯು, 1 ಕೋಟಿ ರೂ. ಮೌಲ್ಯದ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ಅಮೆಝಾನ್ ಕಂಪೆನಿಯ ಕಂಟೈನರ್ ವಾಹನವನ್ನು ಸುಟ್ಟುಹಾಕಿದೆ.
ಬೆಳಗ್ಗೆ 8 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಭಾರೀ ಗಾತ್ರದ ವಾಹನವೊಂದು ಹಠಾತ್ತನೇ ಬ್ರೇಕ್‌ಗಳನ್ನು ಹಾಕಿದಾಗ, ಹಿಂದಿದ್ದ ಹಲವಾರು ವಾಹನಗಳು ಒಂದಕ್ಕೊಂದು ಢಿಕ್ಕಿ ಹೊಡೆದಿವೆ.
ಈ ಸರಣಿ ಢಿಕ್ಕಿಯಲ್ಲಿ ಕಲ್ಲುಗಳನ್ನು ಹೇರಿಕೊಂಡಿದ್ದ ಡಂಪರ್ ಹಾಗೂ ವಾಣಿಜ್ಯ ಸಾಮಾಗ್ರಿಗಳನ್ನು ಸಾಗಾಟ ಮಾಡುತ್ತಿದ್ದ ಕಂಟೈನರ್ ವಾಹನಕ್ಕೆ ಬೆಂಕಿ ತಗಲಿದ್ದು, ಅವು ಕೂಡಾ ಅಗ್ನಿಗಾಹುತಿಯಾಗಿದೆ.
ಬೆಂಕಿಯ ತೀವ್ರ ಜ್ವಾಲೆ ವಾಹನವನ್ನು ಆವರಿಸಿದ್ದರಿಂದ ಕಲ್ಲುಗಳನ್ನು ಸಾಗಿಸುತ್ತಿದ್ದ ಡಂಪರ್ ವಾಹನದಲ್ಲಿದ್ದ ಚಾಲಕ ಹಾಗೂ ಹೆಲ್ಪರ್ ಹೊಗೆ ಬರಲಾಗದೆ ಒಳಗೆ ಸಿಲುಕಿಕೊಂಡಿದ್ದು, ಸಜೀವ ದಹನವಾಗಿದ್ದಾರೆ. ಇವರಿಬ್ಬರೂ ರಾಜಸ್ಥಾನದವರೆಂದು ತಿಳಿದು ಬಂದಿದೆ. ಅಪಘಾತಕ್ಕೀಡಾದ ಇತರ ವಾಹನಗಳಲ್ಲಿ ಸಿಲುಕಿಕೊಂಡಿದ್ದವರನ್ನು ಸ್ಥಳೀಯರು ಸುರಕ್ಷಿತವಾಗಿ ಹೊರಗೆಳೆದಿದ್ದಾರೆ.
ಅಪಘಾತಕ್ಕೀಡಾದ ಅಮೆಝಾನ್ ಕಂಟೈನರ್ ವಾಹನವು ಉಡುಪುಗಳು, ಪಾದರಕ್ಷೆ ಹಾಗೂ ಮೊಬೈಲ್ ಫೋನ್‌ಗಳನ್ನು ಸಾಗಿಸುತ್ತಿತ್ತು. ಬೆಂಕಿಯ ಕೆನ್ನಾಲಿಗೆಯು ಇಡೀ ಸರಕು ಸಾಗಣೆ ವಾಹನವನ್ನು ಸಂಪೂರ್ಣವಾಗಿ ಸುಟ್ಟುಹಾಕಿದ್ದು, ಅಂದಾಜು 1.25 ಕೋಟಿ ರೂ. ನಷ್ಟ ಸಂಭವಿಸಿದೆ. ಹಾನಿಯಾಗದೆ ಇರುವ ಸರಕುಗಳನ್ನು ಸ್ಥಳಾಂತರಿಸಲಾಯಿತು. ಅಪಘಾತಕ್ಕೀಡಾದ ಕಂಟೈನರ್‌ನಿಂದ ಸ್ಥಳೀಯರು ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿತ್ತು.
ಈ ಅವಘಡದಿಂದಾಗಿ ಎಕ್ಸ್‌ಪ್ರೆಸ್‌ವೇನಲ್ಲಿ ಆರು ಕಿ.ಮೀ.ವರೆಗೂ ವಾಹನಸಂಚಾರ ಅಸ್ತವ್ಯಸ್ಥಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 8ರಲ್ಲಿ ವಾಹನಗಳ ದಟ್ಟಣೆಯುಂಟಾಗಿತ್ತು. ಅಗ್ನಿಶಾಮಕದಳದ ವಾಹನಗಳು ಸುಮಾರು ಮೂರು ತಾಸುಗಳ ಸತತ ಕಾರ್ಯಾಚರಣೆ ನಡೆಸಿ ವಾಹನಗಳಿಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದರು. ಸುಟ್ಟುಹೋದ ವಾಹನಗಳನ್ನು ತೆರವುಗೊಳಿಸಲು ಕ್ರೇನ್‌ಗಳನ್ನು ಹಾಗೂ ಆರ್ಥ್‌ಮೂರ್‌ಗಳನ್ನು ಬಳಸಲಾಗಿತ್ತು. ಸುಮಾರು ನಾಲ್ಕು ತಾಸುಗಳ ಕಾಲ ವಾಹನಸಂಚಾರವನ್ನು ಮರುಸ್ಥಾಪಿಸಲಾಗಿತ್ತು.