×
Ad

“ನಿಮ್ಮ ಮಗನನ್ನು ಈ ದಿನ ರಕ್ಷಿಸಲಾಗುತ್ತದೆ ಎಂದು ಕೇಳುತ್ತಲೇ ಇದ್ದೇನೆ; ಆದರೆ, ಆ ದಿನ ಇನ್ನೂ ಬರಲೇ ಇಲ್ಲ”

Update: 2023-11-25 21:04 IST

PHOTO: PTI 

ಪಾಟ್ನಾ: ದೂರದ ಉತ್ತರಾಖಂಡದಲ್ಲಿನ ಸುರಂಗ ಮಾರ್ಗದಲ್ಲಿ ಸಿಲುಕಿರುವ 41 ಮಂದಿ ನಿರ್ಮಾಣ ಕಾರ್ಮಿಕರನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆಯು ಮುಂದುವರಿಯುತ್ತಿದ್ದರೂ, ಸುರಂಗದಲ್ಲಿ ಸಿಲುಕಿಕೊಂಡಿರುವ ಐವರು ಕಾರ್ಮಿಕರ ಕುಟುಂಬದ ಸದಸ್ಯರು ಬಿಹಾರದಲ್ಲಿ ಕುಳಿತು ಈ ಕಾರ್ಯಾಚರಣೆಯನ್ನು ಉಸಿರು ಬಿಗಿ ಹಿಡಿದು ನೋಡುತ್ತಿದ್ದಾರೆ ಎಂದು telegraphindia.com ವರದಿ ಮಾಡಿದೆ.

ರಾಜ್ಯ ವಿಕೋಪ ನಿರ್ವಹಣಾ ಇಲಾಖೆಯ ಪ್ರಕಾರ, ಹಿಮಾಲಯ ತಪ್ಪಲಿನ ರಾಜ್ಯವಾದ ಉತ್ತರಾಖಂಡದಲ್ಲಿನ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಸಬಾ ಅಹ್ಮದ್, ಸೋನು ಸಹ, ವಿರೇಂದ್ರ ಕಿಸ್ಕು, ಸುಶೀಲ್ ಕುಮಾರ್ ಹಾಗೂ ದೀಪಕ್ ಕುಮಾರ್ ಎಂದು ಗುರುತಿಸಲಾಗಿದೆ.

ಮುಝಾಫ್ಫರ್ ಪುರ್ ನಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ದೀಪಕ್ ಕುಮಾರ್ ತಾಯಿ ಉಷಾದೇವಿ, “ನಾವು ಈ ಸುದ್ದಿ ತಿಳಿದಾಗಿನಿಂದ ಆಘಾತಕ್ಕೊಳಗಾಗಿದ್ದು, ಸ್ತಂಭೀಭೂತರಾಗಿದ್ದೇವೆ. ಸುಮಾರು ಎರಡು ವಾರಗಳಿಂದಲೂ ಈ ದಿನ ನನ್ನ ಪುತ್ರನನ್ನು ರಕ್ಷಿಸಲಾಗುವುದು ಎಂಬ ಮಾತನ್ನು ಕೇಳುತ್ತಿದ್ದೇನೆ. ಆದರೆ, ಆ ಈ ದಿನ ಬರಲೇ ಇಲ್ಲ” ಎಂದು ನಿಟ್ಟುಸಿರು ಬಿಟ್ಟರು.

ಉಷಾದೇವಿ ವ್ಯಕ್ತಪಡಿಸಿದ ಅಳಲನ್ನೇ ತೋಡಿಕೊಂಡ ಭೋಜ್ ಪುರ್ ಜಿಲ್ಲೆಯ ನಿವಾಸಿ ಮಿಸ್ಬಾ ಅಹ್ಮದ್, ತಮ್ಮ ಏಕಮಾತ್ರ ಪುತ್ ಸಬಾ ಅಹ್ಮದ್ ಸುರಕ್ಷಿತವಾಗಿರುವ ಕುರಿತು ಕ್ಷಣ ಕ್ಷಣದ ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಪಡೆಯಲು ಮೊಬೈಲ್ ಪರದೆಯತ್ತ ನೋಡುತ್ತಿದ್ದರು.

“ಕುಸಿತಗೊಂಡಿರುವ ಸುರಂಗದಲ್ಲಿ ಅದೃಷ್ಟವಶಾತ್ ಕಾರ್ಯನಿರ್ವಹಿಸುತ್ತಿಲ್ಲದ ಮತ್ತೊಂದು ಕುಟುಂಬದ ಸದಸ್ಯನಿಂದ ಈ ಸುದ್ದಿಯನ್ನು ಮೊದಲು ತಿಳಿದಾಗ ನಾವು ಆಘಾತದಿಂದ ಕುಸಿದು ಬಿದ್ದೆವು” ಎಂದು ಮಿಸ್ಬಾ ತಿಳಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ನಿರ್ಮಾಣ ಹಂತದಲ್ಲಿರುವ, ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘ಚಾರ್ ಧಾಮ್’ ಯೋಜನೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ಸುರಂಗದ ಒಂದು ಭಾಗದೊಳಗೆ ಮಧ್ಯರಾತ್ರಿ ರಂಧ್ರ ಕೊರೆಯುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News