ತುರ್ಕಿಯೆ ವಿವಿಗಳ ಜೊತೆಗಿನ ಎಲ್ಲಾ ಒಪ್ಪಂದಗಳನ್ನು ಸ್ಥಗಿತಗೊಳಿಸಿದ ಐಐಟಿ ಬಾಂಬೆ
Photo | X/@iitbombay
ಮುಂಬೈ: ಭಾರತ- ಪಾಕ್ ನಡುವಿನ ಉದ್ವಿಗ್ನತೆಯ ವೇಳೆ ತುರ್ಕಿಯೆ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಹಿನ್ನೆಲೆ ಐಐಟಿ ಬಾಂಬೆ ಟರ್ಕಿ ವಿಶ್ವವಿದ್ಯಾಲಯಗಳೊಂದಿಗಿನ ಎಲ್ಲಾ ಒಪ್ಪಂದಗಳನ್ನು ಸ್ಥಗಿತಗೊಳಿಸಿದೆ.
ಐಐಟಿ ಬಾಂಬೆ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಮುಂದಿನ ಸೂಚನೆವರೆಗೂ ತುರ್ಕಿಯೆ ವಿಶ್ವವಿದ್ಯಾಲಯಗಳೊಂದಿಗಿನ ಒಪ್ಪಂದಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಯನ್ನು IIT ಬಾಂಬೆ ನಡೆಸುತ್ತಿದೆ ಎಂದು ಹೇಳಿದೆ. ಸಂಸ್ಥೆಯು ಪ್ರಸ್ತುತ ಕೆಲವು ತುರ್ಕಿಯೆ ಸಂಸ್ಥೆಗಳೊಂದಿಗೆ ಅಧ್ಯಾಪಕರ ವಿನಿಮಯ ಯೋಜನೆಯನ್ನು ಹೊಂದಿತ್ತು.
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ವೇಳೆ ತುರ್ಕಿಯೆ ಪಾಕಿಸ್ತಾನಕ್ಕೆ ಬೆಂಬಲ ನೀಡಿತ್ತು. ಭಾರತದ ಮೇಲೆ ದಾಳಿಗೆ ಯತ್ನಿಸಿದ ಪಾಕ್ ಡ್ರೋನ್‌ಗಳಲ್ಲಿ ಹೆಚ್ಚಿನವು ಟರ್ಕಿ ನಿರ್ಮಿತವಾಗಿತ್ತು ಎಂದು ಭಾರತೀಯ ಸೇನೆ ತಿಳಿಸಿತ್ತು.
ಇದರ ಬೆನ್ನಲ್ಲೇ ಭಾರತ ಟರ್ಕಿಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಕಾರ್ಯಚರಿಸುತ್ತಿರುವ ಟರ್ಕಿ ಸಂಸ್ಥೆಯ ಭದ್ರತಾ ಅನುಮತಿಯನ್ನು ಭಾರತ ರದ್ದುಗೊಳಿಸಿತ್ತು. ಇದಲ್ಲದೆ ಏಶ್ಯಾದ ಅತಿ ದೊಡ್ಡ ಹಣ್ಣುಹಂಪಲಗಳು ಮತ್ತು ತರಕಾರಿಗಳ ಸಗಟು ಮಾರುಕಟ್ಟೆಯಾಗಿರುವ ದಿಲ್ಲಿಯ ಆಝಾದ್ ಪುರ ಮಂಡಿಯು ಟರ್ಕಿಯಿಂದ ಸೇಬುಗಳ ಆಮದನ್ನು ನಿಲ್ಲಿಸಲು ನಿರ್ಧರಿಸಿತ್ತು.