×
Ad

Assam | ಮಧ್ಯರಾತ್ರಿ ಕೊಳಕ್ಕೆ ಉರುಳಿದ ಕಾರು; ಮಸೀದಿಯ ಮೈಕ್ ನಲ್ಲಿ ಕೂಗಿ 7 ಪ್ರಯಾಣಿಕರ ಜೀವ ಉಳಿಸಿದ ಇಮಾಮ್!

Update: 2025-12-02 22:50 IST

Screengrab : indiatodayne.in

ಗುವಾಹಟಿ, ಡಿ.02: ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯ ಶ್ರೀಭೂಮಿ ನೀಲಮ್ ಬಜಾರ್‌ ನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ, ಮಸೀದಿಯ ಇಮಾಮ್‌ ಮೌಲಾನಾ ಅಬ್ದುಲ್ ಬಾಸಿತ್ ಅವರು ತ್ವರಿತ ಸ್ಪಂದನೆಯಿಂದ 7 ಪ್ರಯಾಣಿಕರ ಜೀವಗಳನ್ನು ಉಳಿಸಿರುವ ಘಟನೆ ನಡೆದಿದೆ.

ಬಹದ್ದೂರ್‌ ಪುರ ಪ್ರದೇಶದ ರಸ್ತೆ ಬದಿಯ ಕೊಳಕ್ಕೆ ನಿಯಂತ್ರಣ ತಪ್ಪಿದ ಕಾರು ಬಿದ್ದ ಪರಿಣಾಮ, ವಾಹನದೊಳಗಿದ್ದ ಪ್ರಯಾಣಿಕರು ಕ್ಷಣಾರ್ಧದಲ್ಲೇ ನೀರಿನಲ್ಲಿ ಮುಳುಗುತ್ತಿದ್ದರು. ಅಪಘಾತವಾದಾಗ ಉಂಟಾದ ದೊಡ್ಡ ಶಬ್ದವು ಹತ್ತಿರದ ಮಸೀದಿಯಲ್ಲಿದ್ದ ಇಮಾಮ್‌ ಬಾಸಿತ್ ಅವರಿಗೆ ಕೇಳಿತು. ನೋಡಿದರೆ ಪಕ್ಕದಲ್ಲೇ ಇರುವ ಕೊಳದಲ್ಲಿ ವಾಹನದ ಹೆಡ್ ಲೈಟ್ ಮಿನುಗುತ್ತಿದ್ದು ಅವರಿಗೆ ಕಂಡುಬಂತು. ಘಟನೆಯ ಗಂಭೀರತೆ ಅರಿತ ಇಮಾಮ್ ಬಾಸಿತ್ ಅವರು, ವಿಳಂಬ ಮಾಡದೆ ಧ್ವನಿವರ್ಧಕದ ಬಳಿಗೆ ಧಾವಿಸಿದರು. ಗ್ರಾಮಸ್ಥರಿಗೆ ತಕ್ಷಣದ ಎಚ್ಚರಿಕೆ ನೀಡಿದ ಅವರು, ಅಪಘಾತವಾದ ಬಗ್ಗೆ ತಿಳಿಸಿ ತುರ್ತು ನೆರವಿಗಾಗಿ ಸಹಾಯ ಕೋರಿದರು.

"ನೀರಿನೊಳಗೆ ಕಾರಿನ ದೀಪಗಳು ಉರಿಯುತ್ತಿದ್ದುದನ್ನು ಕಂಡ ತಕ್ಷಣ ಧ್ವನಿವರ್ಧಕದಲ್ಲಿ ಜನರನ್ನು ಎಚ್ಚರಿಸಿದೆ. ಧರ್ಮ ಅಥವಾ ಜಾತಿಯ ಬಗ್ಗೆ ಯೋಚಿಸುವ ಸಂದರ್ಭ ಅಲ್ಲ ಅದು. ಮೊದಲ ಆದ್ಯತೆ ಜೀವ ಉಳಿಸುವುದಾಗಿತ್ತು,” ಎಂದು ನೀಲಂ ಬಜಾರ್ ಪ್ರದೇಶದ ನಿವಾಸಿ ಮತ್ತು ಮದರಸಾ ಜಾಮಿಯಾ ಉಲ್ ಉಲೂಮ್‌ ಫುರ್ಕಾನಿಯಾ ಕರೀಮ್‌ ಗಂಜ್‌ ನಲ್ಲಿ ಶಿಕ್ಷಕರಾಗಿರುವ ಬಾಸಿತ್ ತಿಳಿಸಿದ್ದಾರೆ.

ಮೈಕ್ ನಲ್ಲಿ ಘೋಷಣೆಯನ್ನು ಕೇಳಿದ ನಂತರ ಬಹುತೇಕ ಮುಸ್ಲಿಂ ನಿವಾಸಿಗಳೇ ಆಗಿರುವ ಆ ಪ್ರದೇಶದ ಜನರು ಕೊಳಕ್ಕೆ ಧಾವಿಸಿ, ಈಜುತ್ತಾ ಕಾರಿನ ಕಿಟಕಿಗಳನ್ನು ಒಡೆದು, ಏಳು ಮಂದಿ ಪ್ರಯಾಣಿಕರನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಕೆಲವೇ ನಿಮಿಷಗಳಲ್ಲಿ ವಾಹನ ಸಂಪೂರ್ಣವಾಗಿ ಮುಳುಗಿತು ಎಂದು India Today NE ವರದಿ ಮಾಡಿದೆ.

ಸ್ಥಳೀಯ ಧರ್ಮಗುರು ಮೌಲಾನಾ ಅಬ್ದುಲ್ ಹಫೀಜ್ ಅವರು ಬಾಸಿತ್ ಅವರ ಕಾರ್ಯವನ್ನು ಕೊಂಡಾಡಿದರು. ಇದು ನಿಜವಾದ ಮಾನವೀಯತೆಯ ಉದಾಹರಣೆ. ಧರ್ಮಕ್ಕಿಂತ ಮನುಷ್ಯತ್ವ ದೊಡ್ಡದು, ಎಂದರು.

ತ್ರಿಪುರಾದ ನಿವಾಸಿಗಳಾದ ಈ ಪ್ರಯಾಣಿಕರು ಸಿಲ್ಚಾರ್‌ ನಿಂದ ತಮ್ಮ ಮನೆಗೆ ಮರಳುವಾಗ ಈ ಘಟನೆ ಸಂಭವಿಸಿದೆ. ರಕ್ಷಣೆಯ ನಂತರ ಅವರಿಗೆ ಬೇರೆ ವಾಹನಗಳ ಮೂಲಕ ಸುರಕ್ಷಿತವಾಗಿ ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಯಿತು ಎಂದು ತಿಳಿದು ಬಂದಿದೆ.

ಘಟನೆಯ ನಂತರ ಸ್ಥಳೀಯ ಬಿಜೆಪಿ ನಾಯಕ ಇಕ್ಬಾಲ್ ಅವರು ಬಾಸಿತ್ ಅವರನ್ನು ಭೇಟಿ ಮಾಡಿ ಅವರ ಕಾರ್ಯವನ್ನು ಶ್ಲಾಘಿಸಿದರು. ಪೊಲೀಸರು ಘಟನೆಯ ವಿವರಗಳನ್ನು ಸಂಗ್ರಹಿಸಿದ್ದು, ಬಾಸಿತ್‌ ಅವರಿಗೆ ಅಧಿಕೃತ ಗೌರವ ಅಥವಾ ಪ್ರಶಸ್ತಿ ನೀಡುವ ಸಾಧ್ಯತೆಯಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News