ಯುಎಇ | ಕೇರಳದ ಯುವಕನಿಗೆ 240 ಕೋಟಿ ರೂ. ಜಾಕ್‌ಪಾಟ್ ಗೆದ್ದು ಕೊಟ್ಟ ತಾಯಿಯ ಜನ್ಮದಿನಾಂಕ
Image: Gulf News
ಹೊಸದಿಲ್ಲಿ,ಅ.28: ಹಲವಾರು ವರ್ಷಗಳಿಂದ ಅಬುಧಾಬಿಯಲ್ಲಿ ವಾಸವಾಗಿರುವ ಭಾರತೀಯ ವಲಸಿಗ ಅನಿಲಕುಮಾರ್ ಬೊಲ್ಲ(29) ಅವರು 100 ಮಿಲಿಯನ್ ದಿರ್ಹಾಮ್‌ಗಳ (ಸುಮಾರು 240 ಕೋ.ರೂ.) ಯುಎಇಯ ಈವರೆಗಿನ ಅತ್ಯಂತ ದೊಡ್ಡ ಮೊತ್ತದ ಲಾಟರಿ ಬಹುಮಾನವನ್ನು ಗೆಲ್ಲುವ ಮೂಲಕ ಬಹುಕೋಟ್ಯಾಧೀಶರಾಗಿದ್ದಾರೆ.
ಬೊಲ್ಲ ಕಳೆದ ವಾರ ನಡೆದ 23ನೇ ಅದೃಷ್ಟ ಡ್ರಾದಲ್ಲಿ ಎಲ್ಲ ಏಳೂ ಅಂಕಿಗಳನ್ನು ಸರಿಯಾಗಿ ಊಹಿಸುವ ಮೂಲಕ 88 ಲಕ್ಷ ಟಿಕೆಟ್‌ಗಳ ಪೈಕಿ ಅದೃಷ್ಟವಂತ ಟಿಕೆಟ್‌ನ ಮಾಲಿಕನಾಗಿ ಹೊರಹೊಮ್ಮಿದ್ದಾರೆ ಎಂದು ದುಬೈನ ಖಲೀಜ್ ಟೈಮ್ಸ್ ವರದಿ ಮಾಡಿದೆ.
ತಾನು ಸ್ವಯಂಚಾಲಿತವಾಗಿ ಅಂಕಿಗಳ ಸಂಯೋಜನೆಯನ್ನು ಸೃಷ್ಟಿಸುವ ಈಜಿ ಪಿಕ್ ಆಯ್ಕೆಯನ್ನು ಬಳಸಿಕೊಂಡು ತನ್ನ ಬಹುಮಾನಿತ ಟಿಕೆಟ್ ಖರೀದಿಸಿದ್ದೆ. ಆದಾಗ್ಯೂ ತನ್ನ ತಾಯಿಯ ಹುಟ್ಟುಹಬ್ಬವನ್ನು ಗೌರವಿಸಲು ಉದ್ದೇಶಪೂರ್ವಕವಾಗಿ ಅವರ ಜನ್ಮದಿನಾಂಕದಿಂದ 11ರ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದೆ ಎಂದು ಬೊಲ್ಲ ಬಹಿರಂಗಗೊಳಿಸಿದರು.
ಗೆಲುವಿನ ಬಳಿಕ ಬೊಲ್ಲ ತನ್ನ ಹೆತ್ತವರ ಕನಸುಗಳನ್ನು ನನಸಾಗಿಸಲು, ಅವರನ್ನು ಯುಎಇಗೆ ಕರೆತರಲು ಮತ್ತು ಗೆದ್ದ ಹಣದಲ್ಲಿ ಒಂದು ಭಾಗವನ್ನು ದಾನ ಮಾಡಲು ಯೋಜಿಸಿರುವುದಾಗಿ ತಿಳಿಸಿದರು.
ಯುಎಇಯ ಲಾಟರಿ ಇತಿಹಾಸದಲ್ಲಿಯೇ 100 ಮಿಲಿಯನ್ ದಿರ್ಹಾಮ್‌ಗಳ ಬಹುಮಾನವನ್ನು ಗೆದ್ದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಬೊಲ್ಲ ಪಾತ್ರರಾಗಿದ್ದಾರೆ.
ಯುಎಎಇ ಲಾಟರಿ ತಂಡದಿಂದ ತನ್ನ ಜೀವನವನ್ನೇ ಬದಲಿಸುವ ಕರೆಯನ್ನು ಸ್ವೀಕರಿಸಿದಾಗ ಬೊಲ್ಲ ತನ್ನ ಮನೆಯಲ್ಲಿದ್ದು, ವಿಶ್ರಾಂತಿಯನ್ನು ಪಡೆಯುತ್ತಿದ್ದರು. ಲಾಟರಿ ಆರಂಭಗೊಂಡಾಗಿನಿಂದಲೂ ನಿಷ್ಠೆಯಿಂದ ಟಿಕೆಟ್ ಖರೀದಿಸುತ್ತಿದ್ದ ಬೊಲ್ಲ, ಸುದ್ದಿಯನ್ನು ಕೇಳಿದಾಗ ತಾನು ಸಂಪೂರ್ಣವಾಗಿ ಆಘಾತಗೊಂಡಿದ್ದೆ, ಜೊತೆಗೆ ಸಂತಸದ ಕಡಲಲ್ಲಿ ತೇಲಾಡಿದ್ದೆ ಎಂದು ಹೇಳಿದರು.