×
Ad

ಅಲಿಕಲ್ಲು ಮಳೆ, ಬಿರುಗಾಳಿಗೆ ಸಿಲುಕಿದ್ದ ಇಂಡಿಗೋ ವಿಮಾನ ಶ್ರೀನಗರದಲ್ಲಿ ಲ್ಯಾಂಡಿಂಗ್ ಮಾಡಿದ್ದೇ ರೋಚಕ!

Update: 2025-05-23 22:39 IST

PHOTO : PTI

ಹೊಸದಿಲ್ಲಿ: ದಿಲ್ಲಿಯಿಂದ ಶ್ರೀನಗರಕ್ಕೆ ತೆರಳುವ 227 ಪ್ರಯಾಣಿಕರನ್ನು ಹೊತ್ತ ಇಂಡಿಗೊ ಏರ್‌ಲೈನ್ಸ್‌ನ ವಿಮಾನವೊಂದು ವಾಯುಮಾರ್ಗದಲ್ಲಿ ಅನಿರೀಕ್ಷಿತವಾಗಿ ಅಲಿಕಲ್ಲು ಮಳೆಯ ನಡುವೆ ಸಿಲುಕಿ, ಪವಾಡಸದೃಶವಾಗಿ ಪಾರಾಗಿದೆ. ಅಲಿಕಲ್ಲು ಮಳೆಯ ಹೊಡೆತಕ್ಕೆ ಸಿಲುಕಿದ ವಿಮಾನದ ಮೂತಿಯ ತುದಿಭಾಗಕ್ಕೆ ಭಾರೀ ಹಾನಿಯಾಗಿದ್ದು, ಬಿರುಕು ಮೂಡಿದೆ.

ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಮೇ 21ರಂದು ಸಂಜೆ 5 ಗಂಟೆಗೆ ಫ್ಲೈಟ್ 6E 2142 ಹಾರಾಟವನ್ನು ಆರಂಭಿಸಿತ್ತು. ಇಂಡಿಗೋ ವಿಮಾನವು ಭಾರತ-ಪಾಕ್ ಗಡಿಯಲ್ಲಿರುವ ಪಠಾಣ್‌ಕೋಟ್ ಸಮೀಪ ಸಾಗುತ್ತಿದ್ದಂತೆಯೇ ಆಗಸದಲ್ಲಿ ಬಿರುಗಾಳಿ ಹಾಗೂ ಅಲಿಕಲ್ಲು ಮಳೆಯ ಹೊಡೆತಕ್ಕೆ ಸಿಲುಕಿಕೊಂಡಿತ್ತು.

ಬಳಿಕ ವಿಮಾನದ ಫ್ಲೈಟ್ ಸಿಬ್ಬಂದಿ ಭಾರತೀಯ ವಾಯುಪಡೆಯ ಉತ್ತರದ ನಿಯಂತ್ರಣ ಕೇಂದ್ರವನ್ನು ಸಂಪರ್ಕಿಸಿತು. ಪಾಕಿಸ್ತಾನದ ವಾಯುಕ್ಷೇತ್ರದೆಡೆಗೆ ಸಾಗುವ ಎಡಭಾಗಕ್ಕೆ ವಿಮಾನವನ್ನು ತಿರುಗಿಸಲು ಅನುಮತಿ ನೀಡುವಂತೆ ಕೋರಿತು. ಆದರೆ ಆ ಮನವಿಯನ್ನು ತಿರಸ್ಕರಿಸಲಾಯಿತು.

ಆನಂತರ ವಿಮಾನನಿಲ್ದಾಣದ ಸಿಬ್ಬಂದಿ ನೇರವಾಗಿ ಲಾಹೋರ್‌ನ ವಾಯು ಸಂಚಾರ ನಿಯಂತ್ರಣಕೇಂದ್ರವನ್ನು ಸಂಪರ್ಕಿಸಿತು. ಅಲಿಕಲ್ಲು, ಬಿರುಗಾಳಿಯಿಂದ ಪಾರಾಗಲು ತುಸುಹೊತ್ತು ಪಾಕಿಸ್ತಾನದ ವಾಯುಕ್ಷೇತ್ರವನ್ನು ಪ್ರವೇಶಿಸಲು ಅನುಮತಿ ನೀಡುವಂತೆ ಕೋರಿದರು. ಆದರೆ ಅಲ್ಲಿನ ಅಧಿಕಾರಿಗಳು ಅದಕ್ಕೆ ನಿರಾಕರಿಸಿದರು.

ಗುಡುಗುಮಿಂಚಿನಿಂದ ಬಿರುಗಾಳಿ ಎದುರಾದ ಹಿನ್ನೆಲೆಯಲ್ಲಿ ಪೈಲಟ್‌ಗಳು ಮೊದಲಿಗೆ ವಿಮಾನವನ್ನು ದಿಲ್ಲಿಗೆ ಹಿಂದಕ್ಕೆ ಕೊಂಡೊಯ್ಯುವ ಬಗ್ಗೆ ಚಿಂತಿಸಿದ್ದರು. ಆದರೆ ವಿಮಾನವು ಆಗಲೇ ಮೋಡಗಳಿಗೆ ತೀರಾ ಸನ್ನಿಹಿತವಾಗಿತ್ತು. ಕೊನೆಗೂ ಸಿಬ್ಬಂದಿ, ಮೋಡಗಳನ್ನು ಸೀಳಿಕೊಂಡೇ ಶ್ರೀನಗರದತ್ತ ಪ್ರಯಾಣಿಸಲು ನಿರ್ಧರಿಸಿತು.

ಒಂದು ಹಂತದಲ್ಲಿ ವಿಮಾನವು ಪ್ರತಿನಿಮಿಷಕ್ಕೆ 8500 ಅಡಿ ವೇಗದಲ್ಲಿ ಇಳಿಯತೊಡಗಿತ್ತು. ಸಾಮಾನ್ಯವಾಗಿ ಪ್ರತಿನಿಮಿಷಕ್ಕೆ ವಿಮಾನವು ಇಳಿಯುವ ವೇಗದ ದರವು ಪ್ರತಿನಿಮಿಷಕ್ಕೆ 1500ರಿಂದ ಸಾವಿರ ಅಡಿಗಳಾಗಿತ್ತು.

ಅಲಿಕಲ್ಲು ಮಳೆಯ ಹೊಡೆತದಿಂದಾಗಿ ವಿಮಾನದ ಮೂತಿಯ ಭಾಗವು ಹಾನಿಗೀಡಾಗಿದೆ. ಆದರೆ ಪೈಲಟ್ ಎದೆಗುಂದದೆ ಅತ್ಯಂತ ಚಾಕಚಕ್ಯತೆಯಿಂದ ವಿಮಾನವನ್ನು ಶ್ರೀನಗರ ವಿಮಾನನಿಲ್ದಾಣದಲ್ಲಿ ಇಳಿಸುವಲ್ಲಿ ಸಫಲರಾದರು. ವಿಮಾನವು 15 ನಿಮಿಷಗಳಷ್ಟು ವಿಳಂಬವಾಗಿ ಬಂದಿಳಿದಿದೆಯೆಂದು ಮೂಲಗಳು ತಿಳಿಸಿವೆ.

ವಿಮಾನವು ಮಿಂಚಿನ ಬೆಳಕಿನ ನಡುವೆ ಪ್ರಯಾಣಿಸುತ್ತಿರುವುದನ್ನು ಹಾಗೂ ಪ್ರಯಾಣಿಕರು ಅದರಲ್ಲೂ ವಿಶೇಷ ಮಕ್ಕಳುಚೀರಾಡುತ್ತಿರುವ ದೃಶ್ಯಗಳ ವೀಡಿಯೊವನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ.


ಶ್ರೀನಗರ ವಿಮಾನನಿಲ್ದಾಣದಲ್ಲಿ ವಿಮಾನವು ಹದಿನೈದು ನಿಮಿಷ ತಡವಾಗಿ ಇಳಿದಿದೆ. ತಕ್ಷಣವೇ ವಿಮಾನನಿಲ್ದಾಣದ ತಂಡವು ಧಾವಿಸಿ ಬಂದು ಪ್ರಯಾಣಿಕರನ್ನು ಉಪಚರಿಸಿದೆ. ಅಗತ್ಯವಿರುವ ಪರಿಶೀಲನೆ ಹಾಗೂ ನಿರ್ವಹಣೆಯ ಮೂಲಕ ವಿಮಾನವನ್ನು ಹಾರಾಟಕ್ಕೆ ಮುಕ್ತಗೊಳಿಸಲಾಗುವುದು ಎಂದು ಏರ್‌ಲೈನ್ ತಿಳಿಸಿದೆ.

ಭಾರೀ ಮಳೆ, ಬಿರುಗಾಳಿಯ ಹಿನ್ನೆಲೆಯಲ್ಲಿ ದಿಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದ ಹತ್ತು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. 9 ವಿಮಾನಗಳನ್ನು ಜೈಪುರಕ್ಕೆ ಹಾಗೂ ಒಂದು ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ನಿರ್ಗಮನ ವಿಮಾನಗಳ ಹಾರಾಟದ ಮೇಲೆ ಯಾವುದೇ ಪರಿಣಾಮವಾಗಿಲ್ಲವೆಂದು ದಿಲ್ಲಿ ವಿಮಾನನಿಲ್ದಾಣದ ಅಧಿಕಾರಿಗಳು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News