×
Ad

ಪೈಲಟ್ ತರಬೇತಿಗೆ ಅನುಮೋದಿತವಲ್ಲದ ಸಿಮ್ಯುಲೇಟರ್ ಬಳಕೆ: ಇಂಡಿಗೋ ಸಂಸ್ಥೆಗೆ ನೋಟಿಸ್

Update: 2025-08-13 07:46 IST

Photo | PTI

ಹೊಸದಿಲ್ಲಿ: ಕಲ್ಲಿಕೋಟೆ, ಲೆಹ್ ಮತ್ತು ಕಠ್ಮಂಡುವಿನಂಥ ಸವಾಲುದಾಯಕ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯ ಬಗ್ಗೆ 1700 ಪೈಲಟ್ ಗಳಿಗೆ ತರಬೇತಿ ನೀಡಲು ಅನುಮೋದಿತವಲ್ಲದ ಸಿಮ್ಯುಲೇಟರ್ ಗಳನ್ನು ಬಳಕೆ ಮಾಡಿದ್ದಕ್ಕಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಇಂಡಿಗೋ ವಿಮಾನಯಾನ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಿದೆ.

ಸಿ ವರ್ಗದ ವಿಮಾನ ನಿಲ್ದಾಣಗಳಿಗಾಗಿ ಇಂಡಿಗೋ ತನ್ನ ಸುಮಾರು 1700 ಪೈಲಟ್ ಗಳಿಗೆ ನೀಡಿದ ಸಿಮ್ಯುಲೇಟರ್ ತರಬೇತಿಯ ದಾಖಲೆಗಳನ್ನು ಪರಿಶೀಲಿಸಿದ ಡಿಜಿಸಿಎ, "ಅರ್ಹತೆ ಇಲ್ಲದ" ಸಿಮ್ಯುಲೇಟರ್ ಗಳನ್ನು ಬಳಸಿರುವುದನ್ನು ಪತ್ತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂಡಿಗೋ ಸಂಸ್ಥೆಯ ತರಬೇತಿ ವಿಭಾಗದ ನಿರ್ದೇಶಕರಿಗೆ ಆಗಸ್ಟ್ 11ರಂದು ಕಾರಣ ಕೇಳಿ ನೋಟಿಸ್ ನೀಡಿದೆ ಎಂದು ಮೂಲಗಳು ಹೇಳಿವೆ.

ಹದಿನಾಲ್ಕು ದಿನಗಳ ಒಳಗಾಗಿ ನೋಟಿಸ್ ಗೆ ಉತ್ತರಿಸುವಂತೆ ಸೂಚಿಸಲಾಗಿದ್ದು, ವಿಫಲವಾದಲ್ಲಿ ಏಕಪಕ್ಷೀಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ. ಸಿ ವರ್ಗದ ವಿಮಾನ ನಿಲ್ದಾಣಗಳನ್ನು ತಲುಪಿದಾಗ ಲ್ಯಾಂಡಿಂಗ್ ಹಾಗೂ ಟೇಕಾಫ್ ವೇಳೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇವು ಲೆಹ್, ಕಠ್ಮಂಡುವಿನಂಥ ಪರ್ವತಶ್ರೇಣಿಗಳಲ್ಲಿದ್ದು, ದಕ್ಷಿಣ ಮಲಬಾರ್ ಶ್ರೇಣಿಯ ಬೆಟ್ಟಪ್ರದೇಶವಾದ ಕಲ್ಲಿಕೋಟೆಯಂಥ ಸ್ಥಳಗಳಲ್ಲಿವೆ. ಕಡಿದಾದ ಪ್ರದೇಶಗಳ ಇತಿಮಿತಿಯಿಂದಾಗಿ ಈ ವಿಮಾನ ನಿಲ್ದಾಣಗಳು ಗಿಡ್ಡ, ಟೇಬಲ್‌ಟಾಪ್ ರನ್‌ವೇಗಳನ್ನು ಹೊಂದಿದ್ದು, ನಿರ್ದಿಷ್ಟವಾದ ಗಾಳಿ ಮತ್ತು ಹವಾಮಾನ ಒತ್ತಡದ ಪರಿಸ್ಥಿತಿ ಇರುತ್ತದೆ.

ಈ ಪ್ರದೇಶಗಳಿಗೆ ವಿಮಾನಗಳನ್ನು ಒಯ್ಯುವ ಪೈಲಟ್ಗಳಿಗೆ ಈ ಸವಾಲುಗಳನ್ನು ಮತ್ತು ಹವಾಮಾನ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ವಿಶೇಷ ತರಬೇತಿ ನೀಡಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News