ಅಮೆರಿಕ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮಾಡಿದೆ: ಇರಾನ್ ಸಚಿವ ಅಬ್ಬಾಸ್ ಅರಾಗ್ಚಿ
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ (Photo: X/@araghchi)
ಟೆಹರಾನ್ : ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ಅಮೆರಿಕ ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಮಾಡಿದೆ ಎಂದು ಹೇಳಿದ್ದಾರೆ.
ಇರಾನ್ ಮೇಲಿನ ಅಮೆರಿಕದ ದಾಳಿಯು ಶಾಶ್ವತ ಪರಿಣಾಮಗಳನ್ನು ಉಂಟು ಮಾಡುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾದ ಅಮೆರಿಕ, ಇರಾನ್‌ನ ಶಾಂತಿಯುತ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡುವ ಮೂಲಕ ಅಂತಾರಾಷ್ಟ್ರೀಯ ಕಾನೂನು ಮತ್ತು ಎನ್‌ಪಿಟಿಯ ಗಂಭೀರ ಉಲ್ಲಂಘನೆ ಮಾಡಿದೆ ಎಂದು ಅರಾಗ್ಚಿ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ನಡೆದ ಘಟನೆ ಅತಿರೇಕದ್ದು ಮತ್ತು ಶಾಶ್ವತ ಪರಿಣಾಮವನ್ನು ಬೀರುವಂತದ್ದಾಗಿದೆ. ಈ ಅತ್ಯಂತ ಅಪಾಯಕಾರಿ, ಕಾನೂನುಬಾಹಿರ ಮತ್ತು ಕ್ರಿಮಿನಲ್ ನಡವಳಿಕೆಯ ಬಗ್ಗೆ ಯುಎನ್‌ನ ಪ್ರತಿಯೊಂದು ಸದಸ್ಯ ರಾಷ್ಟ್ರ ಕೂಡ ಆತಂಕಪಡಬೇಕು. ಇರಾನ್ ತನ್ನ ಸಾರ್ವಭೌಮತ್ವ, ಹಿತಾಸಕ್ತಿ ಮತ್ತು ಜನರನ್ನು ರಕ್ಷಿಸಲು ಎಲ್ಲಾ ಆಯ್ಕೆಗಳನ್ನು ಕಾಯ್ದಿರಿಸಿಕೊಂಡಿದೆ ಎಂದು ಅಬ್ಬಾಸ್ ಅರಾಗ್ಚಿ ಹೇಳಿದ್ದಾರೆ.