ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಬ್ಬರು ಸಿಎಂಗಳನ್ನು ಬಂಧಿಸಿದ್ದ ಐಆರ್‌ಎಸ್ ಅಧಿಕಾರಿ ರಾಜೀನಾಮೆ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ : ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನಡಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳ ಬಂಧನದ ಮೇಲ್ವಿಚಾರಣೆ ನಡೆಸಿದ್ದ ಜಾರಿನಿರ್ದೇಶನಾಲಯದ ಮಾಜಿ ಅಧಿಕಾರಿ ಕಪಿಲ್ ರಾಜ್ 16 ವರ್ಷಗಳ ಸರಕಾರಿ ಸೇವೆ ಬಳಿಕ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ಹಣಕಾಸು ಸಚಿವಾಲಯ ಹೊರಡಿಸಿದ ಆದೇಶದಲ್ಲಿ ಜುಲೈ 17ರಿಂದ ಜಾರಿಗೆ ಬರುವಂತೆ ಐಆರ್‌ಎಸ್ ಅಧಿಕಾರಿ ಕಪಿಲ್ ರಾಜ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಸ್ವೀಕರಿಸಿದ್ದಾರೆ ಎಂದು ತಿಳಿಸಲಾಗಿದೆ.
45ರ ಹರೆಯದ ಅಧಿಕಾರಿ ಕಪಿಲ್ ರಾಜ್ 2009ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿಯಾಗಿದ್ದಾರೆ. ಜಾರ್ಖಂಡ್‌ನಲ್ಲಿ ಹೇಮಂತ್ ಸೊರೇನ್ ಮತ್ತು ದಿಲ್ಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಬಂಧನದಲ್ಲಿ ಕಪಿಲ್ ರಾಜ್ ಭಾಗಿಯಾಗಿದ್ದರು. ಇನ್ನು 15 ವರ್ಷ ಸೇವಾವಧಿ ಇದ್ದರೂ ಅವರು ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ರಾಜೀನಾಮೆ ನೀಡುವವರೆಗೂ ಅವರನ್ನು ದಿಲ್ಲಿಯ ಜಿಎಸ್ಟಿ ಗುಪ್ತಚರ ವಿಭಾಗದಲ್ಲಿ ಹೆಚ್ಚುವರಿ ಆಯುಕ್ತರಾಗಿ ನೇಮಿಸಲಾಗಿತ್ತು. ಜಾರ್ಖಂಡ್ ಮುಖ್ಯಮಂತ್ರಿ ಸೊರೇನ್ ಅವರ ಬಂಧನದ ಮೇಲ್ವಿಚಾರಣೆಯನ್ನು ಈ ಅಧಿಕಾರಿಗೆ ವಹಿಸಲಾಗಿತ್ತು.
2024ರ ಮಾರ್ಚ್‌ನಲ್ಲಿ ಅಂದಿನ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಸರಕಾರಿ ಬಂಗಲೆಯ ಮೇಲೆ ಈಡಿ ದಾಳಿ ನಡೆಸಿತ್ತು. ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಬಂಧನ ಜ್ಞಾಪಕ ಪತ್ರವನ್ನು ಸಿದ್ಧಪಡಿಸಿ ಆಪ್ ಮುಖ್ಯಸ್ಥರಿಗೆ ತಲುಪಿಸುವಾಗ ರಾಜ್ ಹಾಜರಿದ್ದರು.