ಜಮ್ಮುಕಾಶ್ಮೀರ| ರಮಝಾನ್‌ನಲ್ಲಿ ಅನಧಿಕೃತ ದೇಣಿಗೆ ಸಂಗ್ರಹ ತಡೆಯಲು ಕಿಷ್ತವಾರ್ ಜಿಲ್ಲಾಡಳಿತ ಕ್ರಮ: ರಾಜಕೀಯ ಪಕ್ಷಗಳ ಟೀಕೆ
ಉಮರ್ ಅಬ್ದುಲ್ಲಾ | Photo Credit : PTI
ಶ್ರೀನಗರ: ಪವಿತ್ರ ರಮಝಾನ್ ತಿಂಗಳಲ್ಲಿ ‘ವ್ಯಕ್ತಿಗಳಿಂದ ಅನಿಯಂತ್ರಿತ ಮತ್ತು ಅನಧಿಕೃತ ದೇಣಿಗೆ ಸಂಗ್ರಹಗಳನ್ನು’ ತಡೆಯಲು ಕಿಷ್ತವಾರ್ ಜಿಲ್ಲಾಧಿಕಾರಿಗಳು ಗುರುವಾರ ಆದೇಶವನ್ನು ಹೊರಡಿಸಿದ್ದು, ಜಮ್ಮುಕಾಶ್ಮೀರದ ಹಲವಾರು ರಾಜಕೀಯ ಪಕ್ಷಗಳು ಇದನ್ನು ಕಟುವಾಗಿ ಟೀಕಿಸಿವೆ ಎಂದು The Hindu ವರದಿ ಮಾಡಿದೆ.
ಪವಿತ್ರ ರಮಝಾನ್ ತಿಂಗಳಲ್ಲಿ ಅನಿಯಂತ್ರಿತ ಮತ್ತು ಅನಧಿಕೃತ ದೇಣಿಗೆಗಳ ಸಂಗ್ರಹದ ಪ್ರವೃತ್ತಿಯಿದ್ದು,ಇದಕ್ಕೆ ತಕ್ಷಣ ಕಡಿವಾಣ ಹಾಕುವ ಅಗತ್ಯವಿದೆ ಎಂದು ತನ್ನ ಆದೇಶದಲ್ಲಿ ಹೇಳಿರುವ ಜಿಲ್ಲಾಧಿಕಾರಿ ಪಂಕಜಕುಮಾರ ಶರ್ಮಾ ಅವರು,ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದ ಕಲಂ 163ನ್ನು ಉಲ್ಲೇಖಿಸಿದ್ದಾರೆ.
ಪರಿಹಾರ, ಕಲ್ಯಾಣ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿರುವ ಸಾರ್ವಜನಿಕ ದೇಣಿಗೆಗಳು ದುರುಪಯೋಗವಾದಂತೆ, ಅಕ್ರಮವಾಗಿ ವರ್ಗಾವಣೆಯಾಗದಂತೆ ಅಥವಾ ವಿಧ್ವಂಸಕ ಚಟುವಟಕೆಗಳಿಗೆ ಬಳಕೆಯಾಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಶಾಸನಬದ್ಧ ಹೊಣೆಗಾರಿಕೆಯಾಗಿದೆ. ಸಂಬಂಧಿತ ಕಾಯ್ದೆಗಳಡಿ ನೋಂದಣಿ ಹೊಂದಿರದ ವ್ಯಕ್ತಿಗಳು, ಎನ್‌ಜಿಒಗಳು, ಟ್ರಸ್ಟ್‌ಗಳು, ಸೊಸೈಟಿಗಳು ಅಥವಾ ಸಮಿತಿಗಳು ದೇಣಿಗೆಗಳನ್ನು ಸಂಗ್ರಹಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದಕ್ಕಾಗಿ ವಕ್ಫ್ ಮಂಡಳಿಯ ಕಿಷ್ತವಾರ್ ಘಟಕದ ಕಾರ್ಯ ನಿರ್ವಹಣಾಧಿಕಾರಿ, ಜಾಮಿಯಾ ಮಸೀದಿ ಕಿಷ್ತವಾರ್‌ನ ಇಮಾಮ್ ಅಥವಾ ಸಂಬಂಧಿತ ತಹಶೀಲ್ದಾರರಿಂದ ಪೂರ್ವ ಲಿಖಿತ ಅನುಮತಿಯನ್ನು ಪಡೆಯಬೇಕು ಎಂದು ಆದೇಶದಲ್ಲಿ ಒತ್ತಿ ಹೇಳಲಾಗಿದೆ.
ಆದೇಶವು ಕಟ್ಟುನಿಟ್ಟಾಗಿ ಜಾರಿಯಾಗುವುದನ್ನು ಖಚಿತ ಪಡಿಸಿಕೊಳ್ಳುವಂತೆ ಹಿರಿಯ ಎಸ್‌ಪಿ,ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದೆ.
ಧಾರ್ಮಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪದ ವಿರುದ್ಧ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಜಮ್ಮುಕಾಶ್ಮೀರದ ಉಪ ಮುಖ್ಯಮಂತ್ರಿ ಸುರಿಂದರ್ ಕುಮಾರ ಚೌಧರಿಯವರು,ಸರಕಾರವು ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಬದ್ಧವಾಗಿದೆ. ಆದಾಗ್ಯೂ ಅಧಿಕಾರಿಗಳು ಸಾವಿಧಾನಿಕ ಮತ್ತು ಆಡಳಿತಾತ್ಮಕ ಮಿತಿಗಳನ್ನು ಮೀರದೇ ಕೆಲಸ ಮಾಡಬೇಕು ಎಂದು ಹೇಳಿದರು.
ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಹೊಂದಿರುವ ಅಧಿಕಾರಿಗಳು ಇಂತಹ ಆದೇಶಗಳನ್ನು ಹೊರಡಿಸಿದ್ದಾರೆ ಎಂದು ಹೇಳಿದ ಜಮ್ಮುಕಾಶ್ಮೀರ ಸಚಿವ ಸತೀಶ ಶರ್ಮಾ,ಇದು ದುರದೃಷ್ಟಕರವಾಗಿದೆ. ಅವರು ತಮ್ಮನ್ನು ತಾವು ಬದಲಿಸಲಿಕೊಳ್ಳುವ ಅಗತ್ಯವಿದೆ ಎಂದರು.
ಆದೇಶವು ಅಸಾಂವಿಧಾನಿಕವಾಗಿದೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಹೇಳಿದ ಪಿಡಿಪಿ ನಾಯಕ ಹಾಗೂ ಶಾಸಕ ಆಗಾ ಸೈಯದ್ ಮುಂತಾಜಿರ್ ಮೆಹ್ದಿ ಅವರು, ಈ ಆದೇಶವು ಮುಸ್ಲಿಂ ದತ್ತಿಗಳ ಸ್ವಾಯತ್ತತೆಗೆ ಬೆದರಿಕೆಯೊಡ್ಡಿದೆ ಮತ್ತು ಧಾರ್ಮಿಕ ವ್ಯವಹಾರಗಳಲ್ಲಿ ಅನಗತ್ಯ ಸರಕಾರಿ ಹಸ್ತಕ್ಷೇಪವನ್ನು ಸೂಚಿಸುತ್ತದೆ ಎಂದು ಹೇಳಿದರು.
ರಾಜಕೀಯಗೊಳಿಸಬೇಡಿ: ಉಮರ್ ಅಬ್ದುಲ್ಲಾ
ದೇಣಿಗೆಗಳನ್ನು ನಿಯಂತ್ರಿಸುವ ಆದೇಶವನ್ನು ಸಮರ್ಥಿಸಿಕೊಂಡ ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು, ಧಾರ್ಮಿಕ ವಿಷಯಗಳನ್ನು ರಾಜಕೀಯಗೊಳಿಸಬೇಡಿ ಎಂದು ತನ್ನ ಪಕ್ಷದವರೂ ಸೇರಿದಂತೆ ರಾಜಕೀಯ ನಾಯಕರನ್ನು ಕೇಳಿಕೊಂಡರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಮಝಾನ್ ಸಂದರ್ಭದಲ್ಲಿ ದಾನರೂಪದ ದೇಣಿಗೆಗಳ ದುರುಪಯೋಗವನ್ನು ತಡೆಯಲು ಧಾರ್ಮಿಕ ನಾಯಕರ ಶಿಫಾರಸುಗಳ ಆಧಾರದಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ರೋಗಿಗಳ ಅಥವಾ ದತ್ತಿ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲಾಗುತ್ತದೆ. ಕೆಲವೊಮ್ಮೆ ಅಂತಹ ರೋಗಿಗಳು ನಿಜಕ್ಕೂ ಅಸ್ತಿತ್ವದಲ್ಲಿದ್ದಾರೆಯೇ ಎನ್ನುವುದೂ ಗೊತ್ತಿರುವುದಿಲ್ಲ ಎಂದು ಹೇಳಿದರು.
ಯಾವುದೇ ನಿಯಂತ್ರಣವಿಲ್ಲದೆ ದೇಣಿಗೆಗಳ ಸಂಗ್ರಹವು ಹಣದ ದುರುಪಯೋಗಕ್ಕೆ ಕಾರಣವಾಗುತ್ತದೆ ಮತ್ತು ನಿಜವಾಗಿಯೂ ಸಮಾಜ ಸೇವೆಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಕಿಷ್ತವಾರ್‌ನಲ್ಲಿನ ಧಾರ್ಮಿಕ ನಾಯಕರು ಆದೇಶವನ್ನು ಸ್ವಾಗತಿಸಿದ್ದಾರೆ ಎಂದ ಅವರು, ಧಾರ್ಮಿಕ ವಿಷಯಗಳನ್ನು ರಾಜಕೀಯಗೊಳಿಸದಂತೆ ಶಾಸಕರಿಗೆ ಸೂಚಿಸಿದರು.
ಆದೇಶವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ಅದು ದೇಶವಿರೋಧಿ ಚಟುವಟಿಕೆಗಳಿಗಾಗಿ ದೇಣಿಗೆಗಳ ದುರುಪಯೋಗವನ್ನು ತಡೆಯುತ್ತದೆ ಎಂದು ಹೇಳಿದೆ.