ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ: ನಾಲ್ವರು ಯೋಧರು ಹುತಾತ್ಮ
Update: 2024-07-16 08:41 IST
PC: PTI
ಶ್ರೀನಗರ: ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಕಾಳಗದಲ್ಲಿ ನಾಲ್ವರು ಯೋಧರು ಹುತಾತ್ಮರಾಗಿರುವ ಘಟನೆ ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಂಜೆ ನಡೆದಿರುವ ಬಗ್ಗೆ ವರದಿಯಾಗಿದೆ.
ಸೇನೆಯ ಅಧಿಕಾರಿ ಸೇರಿದಂತೆ ಐವರು ಯೋಧರು ತೀವ್ರವಾಗಿ ಗಾಯಗೊಂಡಿದ್ದು, ನಾಲ್ವರು ಯೋಧರು ಮಂಗಳವಾರ ಮುಂಜಾನೆ ಹುತಾತ್ಮರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ದೋಡಾ ಪಟ್ಟಣದಿಂದ ಸುಮಾರು 55 ಕಿ.ಮೀ. ದೂರದಲ್ಲಿರುವ ದೇಸಾ ಅರಣ್ಯ ವಲಯದ ಧಾರಿ ಗೋಟೆ ಉರರ್‌ಭಗಿಯ ಅತ್ಯಂತ ಕಠಿಣವಾದ ಭೂಪ್ರದೇಶದಲ್ಲೂ ಯೋಧರು ಎನ್‌ಕೌಂಟರ್ ಮುಂದುವರಿಸಿದ್ದರು.
ರಾಷ್ಟ್ರೀಯ ರೈಫಲ್ಸ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ತಂಡ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಗುಂಡಿನ ಕಾಳಗದ ವೇಳೆ ಉಗ್ರರು ತಪ್ಪಿಸಿಕೊಳ್ಳಲು ಯತ್ನಿಸಿದರು ಎನ್ನಲಾಗಿದೆ.