ತಮ್ಮನ್ನು ದೇಶದ್ರೋಹಿಯ ಪುತ್ರ ಎಂದಾತನಿಗೆ ಇತಿಹಾಸದ ಪಾಠ ಮಾಡಿದ ಜಾವೇದ್ ಅಖ್ತರ್!
Photo Credit: PTI
ಹೊಸದಿಲ್ಲಿ: ತಮ್ಮನ್ನು ದೇಶದ್ರೋಹಿಯ ಪುತ್ರ ಎಂದು ನಿಂದಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರನೋರ್ವನಿಗೆ ತಿರುಗೇಟು ನೀಡಿರುವ ಹಿರಿಯ ಚಿತ್ರಕತೆಗಾರ ಹಾಗೂ ಸಾಹಿತಿ ಜಾವೇದ್ ಅಖ್ತರ್, 1857ರಲ್ಲಿ ಸಿಪಾಯಿ ದಂಗೆ ನಡೆದಾಗಿನಿಂದಲೂ ತಮ್ಮ ಕುಟುಂಬವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿತ್ತು ಎಂದು ಇತಿಹಾಸದ ಪಾಠ ಮಾಡಿರುವ ಅಪರೂಪದ ಘಟನೆ ನಡೆದಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಮರು ಚುನಾಯಿತರಾಗುವ ಸಾಧ್ಯತೆ ಕುರಿತು ಜಾವೇದ್ ಅಖ್ತರ್ ಪೋಸ್ಟೊಂದಕ್ಕೆ ಪ್ರತಿಕ್ರಿಯಿಸಿದ್ದರು. ಈ ಪ್ರತಿಕ್ರಿಯೆಗೆ ಪ್ರತಿಯಾಗಿ ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಿದ ದೇಶದ್ರೋಹಿಯ ಪುತ್ರ ನೀವು ಎಂದು ನಿಂದಿಸಿದ್ದ.
ಹಲವಾರು ವಿಷಯಗಳ ಬಗ್ಗೆ ತಮ್ಮ ಧ್ವನಿಯ ವಿಭಿನ್ನ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿರುವ ಅಖ್ತರ್ ಅವರು "ನೀವು ಸಂಪೂರ್ಣವಾಗಿ ಅಜ್ಞಾನಿಯೋ ಅಥವಾ ಪೂರ್ಣಪ್ರಮಾಣದ ಮೂರ್ಖರೋ ಎಂದು ನಿರ್ಧರಿಸುವುದು ಕಷ್ಟವಾಗುತ್ತಿದೆ. 1987ರಿಂದಲೂ ನಮ್ಮ ಕುಟುಂಬವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದೆ. ಬಹುಶಃ ನಿಮ್ಮ ತಂದೆ ಮತ್ತು ತಾತಂದಿರು ಆಂಗ್ಲರ ಸರಕಾರದ ಬೂಟು ನೆಕ್ಕುವಾಗ ನಮ್ಮ ಕುಟುಂಬದ ಸದಸ್ಯರು ಜೈಲು ಶಿಕ್ಷೆ ಹಾಗೂ ಕಾಲಾಪಾನಿ ಶಿಕ್ಷೆಯನ್ನು ಅನುಭವಿಸಿದ್ದರು" ಎಂದು ಎಂದು ತಮ್ಮನ್ನು ಟ್ರೋಲ್ ಮಾಡಿದ ಬಳಕೆದಾರನಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
79 ವರ್ಷದ ಚಿತ್ರ ಸಾಹಿತಿಯಾದ ಜಾವೇದ್ ಅಖ್ತರ್, ವಿಭಜನೆ ಪೂರ್ವ ಬ್ರಿಟಿಷರ ಭಾರತದಲ್ಲಿ ನಡೆದಿದ್ದ ಪ್ರಗತಿಪರ ಲೇಖಕರ ಚಳವಳಿಯಲ್ಲಿ ಸಕ್ರಿಯ ಭಾಗವಾಗಿದ್ದ ಚಿತ್ರ ಸಾಹಿತಿ-ಕವಿ ಜಾನ್ ನಿಸಾರ್ ಅಖ್ತರ್ ಹಾಗೂ ಲೇಖಕಿ ಸಫಿಯಾ ಸಿರಾಜ್ ಉಲ್-ಹಕ್ ದಂಪತಿಗಳ ಪುತ್ರರಾಗಿದ್ದಾರೆ.
ಜಾವೇದ್ ಅಖ್ತರ್ ಅವರ ಮುತ್ತಾತ ಫಝ್ಲ್-ಇ-ಹಕ್ ಖೈರಾಬಾದಿ 1857ರಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ನಡೆದಿದ್ದ ಪ್ರಪ್ರಥಮ ಸಿಪಾಯಿ ದಂಗೆಯಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇದಕ್ಕಾಗಿ ಅವರಿಗೆ ಅಂಡಮಾನ್ ದ್ವೀಪದಲ್ಲಿನ ಸೆಲ್ಯುಲಾರ್ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆ ಎಂದೇ ಕರೆಯಲಾಗುವ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. 1864ರಲ್ಲಿ ಖೈರಾಬಾದಿ ಮೃತಪಟ್ಟಿದ್ದರು.