×
Ad

ಇಂಡಿಯಾ ಜೊತೆ ಜೆಡಿಯು ದೃಢವಾಗಿ ನಿಲ್ಲಲಿದೆ, ಆದರೆ ಕಾಂಗ್ರೆಸ್ ಆತ್ಮವಿಮರ್ಶೆ ಮಾಡಬೇಕು : ಜೆಡಿಯು ಅಧ್ಯಕ್ಷ ಕುಶವಾಹ

Update: 2024-01-26 21:13 IST

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎನ್‌ಡಿಎ ಮೈತ್ರಿಕೂಟವನ್ನು ಸೇರಲಿದ್ದಾರೆಂಬ ಊಹಾಪೋಹಗಳನ್ನು ಅವರ ಪಕ್ಷವಾದ ಜೆಡಿಯು ಶುಕ್ರವಾರ ನಿರಾಕರಿಸಿದ್ದು, ಇಂಡಿಯಾ ಮೈತ್ರಿಕೂಟದ ಜೊತೆ ದೃಢವಾಗಿ ನಿಲ್ಲುವುದಾಗಿ ತಿಳಿಸಿದೆ. ಆದರೆ ಮೈತ್ರಿಕೂಟದ ಪಾಲುದಾರ ಪಕ್ಷಗಳ ಕುರಿತಾದ ನಿಲುವು ಹಾಗೂ ಲೋಕಸಭಾ ಚುನಾವಣೆಯಲ್ಲಿ ಸೀಟುಗಳ ಹಂಚಿಕೆ ಬಗ್ಗೆ ಕಾಂಗ್ರೆಸ್ ಪಕ್ಷವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದು ಅದು ಕರೆ ನೀಡಿದೆ.

ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ವಾಪಸಾಗಲು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಯೋಚಿಸುತ್ತಿದೆಯೆಂಬ ವದಂತಿಗಳನ್ನು ಜೆಡಿಯು ಬಿಹಾರ ರಾಜ್ಯಾಧ್ಯಕ್ಷ ಉಮೇಶ್ ಸಿಂಗ್ ಕುಶವಾಹ ಅವರು ತಳ್ಳಿಹಾಕಿದ್ದಾರೆ.

‘‘ ಬಿಹಾರದ ಆಡಳಿತಾರೂಢ ಮಹಾಘಟಬಂಧನ ಮೈತ್ರಿಕೂಟದಲ್ಲಿ ಎಲ್ಲವೂ ಚೆನ್ನಾಗಿದೆ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕೆಲವು ವದಂತಿಗಳು ಅಜೆಂಡಾಗಳಿಂದ ಪ್ರೇರಿತವಾಗಿದೆ’’ ಎಂದವರು ಹೇಳಿದ್ದಾರೆ.

‘‘ನಾನು ಮುಖ್ಯಮಂತ್ರಿಯವರನ್ನು ನಿನ್ನೆ ಹಾಗೂ ಇಂದು ಭೇಟಿಯಾಗಿದ್ದೆ. ಅದೊಂದು ಸಾಮಾನ್ಯ ಮಾತುಕತೆಯಾಗಿತ್ತು. ಈಗ ಹರಿದಾಡುತ್ತಿರುವ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ’’ ಎಂದು ಕುಶವಾಹ ತಿಳಿಸಿದ್ದಾರೆ. ಪಾಟ್ನಾಗೆ ಧಾವಿಸುವಂತೆ ಪಕ್ಷದ ಶಾಸಕರಿಗೆ ಸೂಚಿಸಲಾಗಿದೆಯೆಂಬ ವದಂತಿಗಳನ್ನು ಕೂಡಾ ಅವರು ತಳ್ಳಿಹಾಕಿದರು.

ಶುಕ್ರವಾರ ನಡೆದ ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮದ ವೇದಿಕೆಯಲ್ಲಿ ನಿತೀಶ್ ಕುಮಾರ್ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಪರಸ್ಪರ ದೂರದಲ್ಲಿ ಆಸೀನರಾಗಿದ್ದಕ್ಕೆ ಹೆಚ್ಚು ಅರ್ಥ ಕಲ್ಪಿಸುವ ಅಗತ್ಯವಿಲ್ಲವೆಂದವರು ಹೇಳಿದ ಅವರು ಇಂಡಿಯಾ ಮೈತ್ರಿಕೂಟದ ಜೊತೆ ಜೆಡಿಯು ದೃಢವಾಗಿ ನಿಲ್ಲುತ್ತದೆ ಎಂದರು.

ಆದಾಗ್ಯೂ, ಕಾಂಗ್ರೆಸ್ ಪಕ್ಷವು, ಮೈತ್ರಿಕೂಟದ ಇತರ ಅಂಗಪಕ್ಷಗಳ ಕುರಿತ ಅದು ತಾಳಿರುವ ನಿಲುವು ಹಾಗೂ ಸೀಟು ಹಂಚಿಕೆಯ ವಿಷಯಗಳಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದು ಕುಶವಾಹ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿತೆಯನ್ನು ಸಾಧ್ಯವಾದಷ್ಟು ಬೇಗನೇ ಅಂತಿಮಗೊಳಿಸಬೇಕು, ಹಾಗಾದಲ್ಲಿ ಮಾತ್ರ ಚುನಾವಣೆ ಬಗ್ಗೆ ಗಮನ ಕೇಂದ್ರೀಕರಿಸಲು ಸಾಧ್ಯವಾಗಲಿದೆ ಎಂದರು.

ಪಂಜಾಬ್ ನಲ್ಲಿ ಆಪ್ ಹಾಗೂ ಪಶ್ಚಿಮಬಂಗಾಳದಲ್ಲಿ ಟಿಎಂಸಿ ಪಕ್ಷಗಳು ಕಾಂಗ್ರೆಸ್ ಜೊತೆ ಚುನಾವಣಾ ಮೈತ್ರಿಯ ಸಾಧ್ಯತೆಯನ್ನು ತಳ್ಳಿಹಾಕಿರುವ ಬೆನ್ನಲ್ಲೇ ಜೆಡಿಯು ನಾಯಕ ಈ ಹೇಳಿಕೆಯನ್ನು ನೀಡಿರುವುದು ಹೆಚ್ಚಿನ ಮಹತ್ವ ಪಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News