ದಿಲ್ಲಿ ಪೊಲೀಸ್, ಸಿಬಿಐಯಿಂದ ನಿರ್ಲಕ್ಷ್ಯ: ನಾಪತ್ತೆಯಾದ ಜೆಎನ್‌ಯು ವಿದ್ಯಾರ್ಥಿ ನಜೀಬ್ ತಾಯಿಯಿಂದ ಆರೋಪ
PC : PTI
ಹೊಸದಿಲ್ಲಿ: ನನ್ನ ಮಗ, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣದಲ್ಲಿ ಸಿಬಿಐ ಮತ್ತು ದಿಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಫಾತಿಮಾ ನಫೀಸ್ ಮಂಗಳವಾರ ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ಗೆ ಹೋಗಬೇಕಾದರೆ ನಾನು ಹಾಗೆಯೇ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ನಜೀಬ್ ಅಹ್ಮದ್ 2016ರಿಂದ ನಾಪತ್ತೆಯಾಗಿದ್ದಾರೆ.
ನನ್ನ ಕೊನೆಯುಸಿರು ಇರುವವರೆಗೂ ಹೋರಾಡುತ್ತೇನೆ ಎಂದು ಅವರು ಫೇಸ್ ಬುಕ್ ಸಂದೇಶವೊಂದರಲ್ಲಿ ಹೇಳಿದ್ದಾರೆ.
ನಜೀಬ್ ಅಹ್ಮದ್ ನಾಪತ್ತೆ ಪ್ರಕರಣವನ್ನು ಮುಚ್ಚಲು ದಿಲ್ಲಿಯ ನ್ಯಾಯಾಲಯವೊಂದು ಸೋಮವಾರ ಸಿಬಿಐಗೆ ಅನುಮತಿ ನೀಡಿದೆ. ಸಿಬಿಐಯು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಥಮ ವರ್ಷದ ವಿದ್ಯಾರ್ಥಿ ನಜೀಬ್ 2016 ಅಕ್ಟೋಬರ್ 15ರಂದು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಮಹಿ-ಮಾಂಡ್ವಿ ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದರು. ನಾಪತ್ತೆಯಾದ ಹಿಂದಿನ ರಾತ್ರಿ ಅವರ ಮೇಲೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನೊಂದಿಗೆ ಗುರುತಿಸಿಕೊಂಡಿದ್ದಾರೆ ಎನ್ನಲಾದ ಕೆಲವು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಪ್ರಕರಣದ ತನಿಖೆಯನ್ನು ಮೊದಲು ದಿಲ್ಲಿ ಪೊಲೀಸರು ನಡೆಸಿದ್ದರು. ಬಳಿಕ ಅದನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.
ನನ್ನ ಹೋರಾಟ ಕೇವಲ ನನ್ನ ಮಗನಿಗಾಗಿ ಮಾತ್ರವಲ್ಲ, ತನ್ನ ಮಗುವಿಗೆ ನ್ಯಾಯ ಬೇಕೆಂದು ಕೇಳುವ ಎಲ್ಲ ತಾಯಂದಿರ ಪರವಾಗಿ ಎಂದು ನಫೀಸ್ ಹೇಳಿದ್ದಾರೆ. ‘‘ನ್ಯಾಯ ಪಡೆಯುವುದಕ್ಕಾಗಿ ನಾನು ಈ ದೇಶದ ಸುಪ್ರೀಂ ಕೋರ್ಟ್ಗೆ ಹೋಗಬೇಕಾದರೆ, ಅಲ್ಲಿಗೂ ಹೋಗುತ್ತೇನೆ’’ ಎಂದು ಅವರು ಹೇಳಿದ್ದಾರೆ.
‘‘ನನ್ನ ನಜೀಬ್ ನಾಪತ್ತೆಯಾದ ಬಳಿಕ ಒಂಭತ್ತು ವರ್ಷಗಳೇ ಸಂದಿವೆ. ಮೊದಲ ದಿನದಿಂದಲೇ ದಿಲ್ಲಿ ಪೊಲೀಸ್ ಮತ್ತು ಸಿಬಿಐ ತೋರಿಸಿರುವ ನಿರ್ಲಕ್ಷ್ಯವೇ ಇಂದಿನ ಈ ಪರಿಸ್ಥಿತಿಗೆ ಕಾರಣವಾಗಿದೆ. ಸಿಬಿಐನ ಮುಚ್ಚುಗಡೆ ವರದಿಯನ್ನು ನ್ಯಾಯಾಲಯ ಸ್ವೀಕರಿಸಿದೆ’’ ಎಂದು ಅವರು ಹೇಳಿದ್ದಾರೆ.
‘‘ಹೆಚ್ಚಿನ ಸಂದರ್ಭಗಳಲ್ಲಿ ನಾನು ನನ್ನನ್ನೇ ಕೇಳುತ್ತೇನೆ. ನಾನು ಭರವಸೆಯನ್ನು ತೊರೆಯಲು ಹೇಗೆ ಸಾಧ್ಯ? ನನ್ನ ಧೈರ್ಯ ಉಡುಗಲು ಹೇಗೆ ಅವಕಾಶ ಮಾಡಿಕೊಡಲಿ? ಅವನು ನನ್ನ ಮಗ. ನನಗೆ ನನ್ನ ಮಗ ಬೇಕು. ಅದಕ್ಕಾಗಿ ನಾನು ಈ ದೇಶದ ಪ್ರತಿಯೊಂದು ನ್ಯಾಯಾಲಯಕ್ಕೆ ಹೋಗಬೇಕಾಗಿದ್ದರೆ, ನಾನು ಹೋಗುತ್ತೇನೆ. ನನ್ನ ಕೊನೆಯ ಉಸಿರಿನವರೆಗೂ ಹೋರಾಡುತ್ತೇನೆ’’ ಎಂದು ಅವರು ಬರೆದಿದ್ದಾರೆ.
►ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮವಿಲ್ಲ
ದಿಲ್ಲಿ ಪೊಲೀಸರಾಗಲಿ, ಸಿಬಿಐ ಆಗಲಿ ನನ್ನ ಮಗನ ಮೇಲೆ ಹಲ್ಲೆ ಮಾಡಿ ನಾಪತ್ತೆ ಮಾಡಿದ ಪುಂಡ ಎಬಿವಿಪಿ ವಿದ್ಯಾರ್ಥಿಗಳನ್ನು ಬಂಧಿಸಲಿಲ್ಲ ಅಥವಾ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಫಾತಿಮಾ ನಫೀಸ್ ಆರೋಪಿಸಿದರು.
ಅತ್ಯಂತ ದೊಡ್ಡ ತನಿಖಾ ಸಂಸ್ಥೆಗಳಿಗಾಗಲಿ, ಇಡೀ ನ್ಯಾಯಾಂಗ ವ್ಯವಸ್ಥೆಗಾಗಲಿ ನನ್ನ ಮಗ ಎಲ್ಲಿದ್ದಾನೆಂದು ಹೇಳಲು ಸಾಧ್ಯವಾಗಿಲ್ಲ ಎಂದರು.
‘‘ವರ್ಷಗಳ ಕಾಲ, ನನ್ನ ಮಗನ ಬಗ್ಗೆ ಸುಳ್ಳುಗಳನ್ನು ಹರಡುತ್ತಾ ಬರಲಾಯಿತು. ಬಳಿಕ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಇಂಥ ಎಲ್ಲಾ ವಿಷಯಗಳನ್ನು ತೆಗೆದುಹಾಕುವಂತೆ ದಿಲ್ಲಿ ಹೈಕೋರ್ಟ್ ಆದೇಶ ನೀಡಿತು’’ ಎಂದು ಅವರು ನುಡಿದರು.