×
Ad

ಕೇರಳ | ಜವಳಿ ಮಳಿಗೆಯೊಳಗೆ ಸಿಲುಕಿದ್ದ ಗುಬ್ಬಚ್ಚಿಯನ್ನು ಬಿಡುಗಡೆ ಮಾಡಲು ನ್ಯಾಯಾಧೀಶರೇ ಬಂದರು!

ಮೂರು ದಿನ ಸಿಲುಕಿದ್ದ ಗುಬ್ಬಚ್ಚಿಗೆ ಗ್ರಾಮಸ್ಥರ ಜೀವದಾನ

Update: 2025-11-02 14:23 IST

Photo | TheBetterIndia

ಕಣ್ಣೂರು, ಏಪ್ರಿಲ್ 11: ಮುಚ್ಚಿದ್ದ ಜವಳಿ ಅಂಗಡಿಯೊಳಗೆ ಮೂರು ದಿನಗಳಿಂದ ಸಿಕ್ಕಿಹಾಕಿಕೊಂಡಿದ್ದ ಸಣ್ಣ ಗುಬ್ಬಚ್ಚಿಯ ಜೀವ ಉಳಿಸಲು ಗ್ರಾಮಸ್ಥರು ನಡೆಸಿದ ಹೋರಾಟ ಕೊನೆಗೂ ಫಲ ನೀಡಿದೆ. ಕೇರಳದ ಕಣ್ಣೂರಿನ ಉಲ್ಲಿಕಲ್ ಗ್ರಾಮದಲ್ಲಿ ನಡೆದ ಈ ಘಟನೆ ಮಾನವೀಯತೆ, ಕರುಣೆ ಮತ್ತು ಒಗ್ಗಟ್ಟಿನ ಶಕ್ತಿಯ ಜೀವಂತ ಸಾಕ್ಷಿಯಾಗಿದೆ.

ಸ್ಥಳೀಯ ಮೇಸ್ತ್ರಿ ಮನೋಜ್ ಕುಮಾರ್ ಅವರು ಗುಬ್ಬಚ್ಚಿಯನ್ನು ಮೊದಲು ಗಮನಿಸಿದರು. ಪೈಪ್‌ ನ ಸಣ್ಣ ರಂಧ್ರದ ಮೂಲಕ ಅಂಗಡಿಗೆ ನುಗ್ಗಿದ ಗುಬ್ಬಚ್ಚಿ ಹೊರಬರುವ ದಾರಿ ಕಾಣದೆ ಗಾಜಿನೊಳಗೆ ಅತ್ತಿತ್ತ ಅಲೆದಾಡುತ್ತಾ ಪರದಾಡುತ್ತಿತ್ತು. ಅದರ ರೆಕ್ಕೆಗಳು ಗಾಜಿಗೆ ಅಪ್ಪಳಿಸುತ್ತಿದ್ದ ಶಬ್ದವು ಗ್ರಾಮಸ್ಥರ ಮನಸ್ಸಿಗೆ ತಟ್ಟಿತು.

ಅಗ್ನಿಶಾಮಕ ದಳದ ಸಿಬ್ಬಂದಿ, ಗ್ರಾಮದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಎಷ್ಟೇ ಪ್ರಯತ್ನಿಸಿದರೂ, ಆಸ್ತಿಗೆ ಸಂಬಂಧಿಸಿದ ನ್ಯಾಯಾಲಯದ ವಿವಾದದಿಂದಾಗಿ ಅಂಗಡಿ ತೆರೆಯಲು ನಿಷೇಧವಿದ್ದ ಕಾರಣ ಪಕ್ಷಿಯನ್ನು ಬಿಡುಗಡೆ ಮಾಡಲು ಸಾಧ್ಯವಾಗಲೇ ಇಲ್ಲ.

ಆದರೆ ಗ್ರಾಮಸ್ಥರು ಅಷ್ಟಕ್ಕೇ ಹಿಂತಿರುಗಲಿಲ್ಲ. ಆಟೋ ಚಾಲಕರು, ವ್ಯಾಪಾರಿಗಳು ಮತ್ತು ಸ್ಥಳೀಯ ಯುವಕರು ಸೇರಿ ಸಣ್ಣ ರಂಧ್ರದ ಮೂಲಕ ಪಕ್ಷಿಗೆ ನೀರು ಹಾಗೂ ಆಹಾರ ನೀಡುತ್ತಾ ಅದರ ಜೀವ ಉಳಿಸಿದರು.

ಹಕ್ಕಿಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದಂತೆಯೇ, ಗ್ರಾಮಸ್ಥರು ನ್ಯಾಯಾಲಯದ ಬಾಗಿಲು ತಟ್ಟಿದರು. ಅವರ ಮನವಿಯನ್ನು ಆಲಿಸಿದ ಪ್ರಧಾನ ಜಿಲ್ಲಾ ನ್ಯಾಯಾಧೀಶ ಕೆ.ಟಿ. ನಿಸಾರ್ ಅಹ್ಮದ್ ಅವರು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಅಂಗಡಿಯನ್ನು ತೆರೆಯಲು ಅನುಮತಿ ನೀಡಿದರು.

ಕೊನೆಗೆ ಅಂಗಡಿ ಬಾಗಿಲು ತೆರೆಯಲಾಯಿತು. ಮೂರು ದಿನಗಳಿಂದ ಸಿಲುಕಿದ್ದ ಗುಬ್ಬಚ್ಚಿ ಮುಕ್ತವಾಗಿ ಆಕಾಶದತ್ತ ಹಾರಿತು. ಗ್ರಾಮಸ್ಥರ ಕಣ್ಣಲ್ಲಿ ಆನಂದಭಾಷ ಜಿನುಗುತ್ತಿತ್ತು.

ಕೇರಳದ ಉಲ್ಲಿಕಲ್‌ನಲ್ಲಿ 2024 ರಲ್ಲಿ ನಡೆದ ಈ ಘಟನೆಯನ್ನು The Better India ತನ್ನ ಫೇಸ್ ಬುಕ್ ಖಾತೆಯಲ್ಲಿ ಮರು ಪೋಸ್ಟ್ ಮಾಡಿದೆ. ಸಣ್ಣ ಗುಬ್ಬಚ್ಚಿಯೊಂದಕ್ಕೆ ಮಿಡಿದ ಮನಸ್ಸುಗಳಿಗೆ, ಜನರು ತಲೆದೂಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News