ಗಾಝಾದಲ್ಲಿ ನರಮೇಧ ನಡೆಯುತ್ತಿರುವಾಗ ಬಲಪಂಥೀಯ ಇಸ್ರೇಲಿ ಸಚಿವರಿಗೆ ಆತಿಥ್ಯ; ಮೋದಿ ಸರಕಾರದ ನಡೆಯನ್ನು ಖಂಡಿಸಿದ ಕೇರಳ ಸಿಎಂ
ಪಿಣರಾಯಿ ವಿಜಯನ್ | PC : PTI
ತಿರುವನಂತಪುರ,ಸೆ.10: ಗಾಝಾದಲ್ಲಿ ನರಮೇಧ ನಡೆಯುತ್ತಿರುವಾಗ ಇಸ್ರೇಲಿನ ವಿವಾದಾತ್ಮಕ ತೀವ್ರ ಬಲಪಂಥೀಯ ರಾಜಕಾರಣಿ ಹಾಗೂ ದೇಶದ ವಿತ್ತಸಚಿವ ಬೆಝೆಲೆಲ್ ಸ್ಮಾಟ್ರಿಚ್ ಅವರನ್ನು ಆಹ್ವಾನಿಸಿದ್ದಕ್ಕಾಗಿ ಮತ್ತು ಆತಿಥ್ಯವನ್ನು ಒದಗಿಸಿದ್ದಕ್ಕಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮೋದಿ ಸರಕಾರವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಸ್ಮಾಟ್ರಿಚ್ ಸೆ.8ರಿಂದ 10ರವರೆಗೆ ಭಾರತ ಭೇಟಿಯಲ್ಲಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಫೆಲೆಸ್ತೀನ್ ಹೋರಾಟಕ್ಕೆ ಅರೆಮನಸ್ಸಿನ ಬೆಂಬಲಕ್ಕಾಗಿ ಮೋದಿ ಸರಕಾರವು ವ್ಯಾಖ್ಯಾನಕಾರರು ಮತ್ತು ಇಂಡಿಯಾ ಮೈತ್ರಿಕೂಟದ ಪಕ್ಷಗಳಿಗೆ ಟೀಕೆಗಳಿಗೆ ಗುರಿಯಾಗಿದೆ. ಆದರೆ ಓರ್ವ ಮುಖ್ಯಮಂತ್ರಿ ಭಾರತದ ವಿದೇಶಿ ಆದ್ಯತೆಗಳನ್ನು ತರಾಟೆಗೆತ್ತಿಕೊಂಡಿರುವುದು ಈವರೆಗಿನ ಅತ್ಯಂತ ಪ್ರಬಲ ಔಪಚಾರಿಕ ಪ್ರತಿಕ್ರಿಯೆಯಾಗಿದೆ.
ದೇಶದಲ್ಲಿ ಎಡರಂಗದ ಏಕೈಕ ಮುಖ್ಯಮಂತ್ರಿಯಾಗಿರುವ ವಿಜಯನ್ ಮಂಗಳವಾರ ತನ್ನ ಎಕ್ಸ್ ಪೋಸ್ಟ್‌ನಲ್ಲಿ, ‘ತೀವ್ರ ಬಲಪಂಥೀಯ ಉಗ್ರಗಾಮಿ ಹಾಗೂ ಇಸ್ರೆಲ್ ನ ಕ್ರೂರ ಆಕ್ರಮಣ ಮತ್ತು ವಿಸ್ತರಣಾವಾದಿ ಕಾರ್ಯಸೂಚಿಯ ಮುಖ್ಯಶಿಲ್ಪಿಯಾಗಿರುವ ಆ ದೇಶದ ವಿತ್ತಸಚಿವ ಬೆಜೆಲೆಲ್ ಸ್ಮಾಟ್ರಿಚ್ ರನ್ನು ಆಹ್ವಾನಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಬಲವಾಗಿ ಖಂಡಿಸುತ್ತೇನೆ. ಗಾಝಾದಲ್ಲಿ ನರಮೇಧ ನಡೆಯುತ್ತಿರುವ ಸಮಯದಲ್ಲಿ ನೆತನ್ಯಾಹು ಆಡಳಿತದ ಪ್ರತಿನಿಧಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದು ಫೆಲೆಸ್ತೀನ್ ನೊಂದಿಗಿನ ಭಾರತದ ಐತಿಹಾಸಿಕ ಒಗ್ಗಟ್ಟಿಗೆ ಬಗೆದಿರುವ ದ್ರೋಹಕ್ಕಿಂತ ಕಡಿಮೆಯೇನಲ್ಲ. ಫೆಲೆಸ್ತೀನ್ ಗೆ ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ಮಾರ್ಗವನ್ನು ಅನುಸರಿಸದಿದ್ದಾಗ ಇಸ್ರೇಲ್ ನೊಂದಿಗೆ ಮಿಲಿಟರಿ, ಭದ್ರತಾ ಮತ್ತು ಆರ್ಥಿಕ ಸಂಬಂಧಗಳನ್ನು ಕಾಯ್ದುಕೊಳ್ಳುವುದು ಶೋಚನೀಯ’ ಎಂದು ಹೇಳಿದ್ದಾರೆ.
ಸ್ಮಾಟ್ರಿಚ್ ಅವರ ಉಗ್ರಗಾಮಿ ಧೋರಣೆಗಾಗಿ ಅವರನ್ನು ಗುರಿಯಾಗಿಸಿಕೊಂಡು ಅಂತರರಾಷ್ಟ್ರೀಯ ಟೀಕೆಗಳ ಹಿನ್ನೆಲೆಯಲ್ಲಿ ಅವರ ಭಾರತ ಭೇಟಿ ನಡೆದಿದೆ.
ಸ್ಮಾಟ್ರಿಚ್ ತನ್ನ ಕಠಿಣ ಹೇಳಿಕೆಗಳಿಗಾಗಿ ಹಲವಾರು ಪಾಶ್ಚಾತ್ಯ ಸರಕಾರಗಳು ಮತ್ತು ಐರೋಪ್ಯ ಒಕ್ಕೂಟದಿಂದ ನಿರ್ಬಂಧಗಳು ಮತ್ತು ಖಂಡನೆಗಳನ್ನು ಎದುರಿಸಿದ್ದಾರೆ.
ಜೂನ್ ನಲ್ಲಿ ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ನ್ಯೂಝಿಲಂಡ್ ಮತ್ತು ನಾರ್ವೆ ಫೆಲೆಸ್ತೀನಿಗಳ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಸ್ಮಾಟ್ರಿಚ್ ಮತ್ತು ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗುವಿಯರ್ ಮೇಲೆ ನಿರ್ಬಂಧಗಳನ್ನು ಹೇರಿದ್ದವು.
ಜುಲೈನಲ್ಲಿ ಸ್ಲೊವೇನಿಯಾ ಅವರಿಬ್ಬರನ್ನೂ ‘ಸ್ವೀಕಾರಾರ್ಹವಲ್ಲದ ವ್ಯಕ್ತಿಗಳು’ ಎಂದು ಘೋಷಿಸಿತ್ತು. ನೆದರ್ ಲ್ಯಾಂಡ್ಸ್ ಕೂಡ ಅವರಿಗೆ ಪ್ರವೇಶ ನಿಷೇಧಗಳನ್ನು ವಿಧಿಸಿತ್ತು. ಗಾಝಾ ಕುರಿತು ಅವರ ಹೇಳಿಕೆಗಳು ಜನಾಂಗೀಯ ಶುದ್ಧೀಕರಣವನ್ನು ಬೆಂಬಲಿಸಿವೆ ಎಂದು ಅದು ಹೇಳಿತ್ತು.
ಆದಾಗ್ಯೂ ಸ್ಮಾಟ್ರಿಚ್ ಮೂರು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದು, ಸೋಮವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.