ಕೊಚ್ಚಿ ಬಾಂಬ್ ಸ್ಫೋಟ ಪ್ರಕರಣದ ವರದಿ: ಮಕ್ತೂಬ್ ಮೀಡಿಯಾ ಸಂಪಾದಕರ ವಿಚಾರಣೆ
ರೆಜಾಝ್ ಎಂ. ಶೀಬಾ, ಅಸ್ಲಾಹ್ ಕಯ್ಯಾಲಕ್ಕತ್| Instagram/Facebook
ಎರ್ನಾಕುಲಂ: ಕಳೆದ ತಿಂಗಳು ಎರ್ನಾಕುಲಂ ಜಿಲ್ಲೆಯ ಜೆಹೋವಾನ ಸಾಕ್ಷಿ ಸಭೆಯಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ ಗುರುವಾರ ಕೇರಳ ಪೊಲೀಸರು ಮಕ್ತೂಬ್ ಮೀಡಿಯಾದ ಸಂಪಾದಕನನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು scroll.in ವರದಿ ಮಾಡಿದೆ.
ಕೊಚ್ಚಿಯಲ್ಲಿ ಸಂಭವಿಸಿದ ಸ್ಫೋಟಗಳಿಗೆ ಸಂಬಂಧಿಸಿದಂತೆ ಆ ಸುದ್ದಿ ಜಾಲತಾಣಕ್ಕೆ ವರದಿಯೊಂದನ್ನು ಬರೆದಿದ್ದ ಹವ್ಯಾಸಿ ಪತ್ರಕರ್ತ ರೆಜಾಝ್ ಎಂ. ಶೀಬಾ ಸೈದೀಕ್ ವಿರುದ್ಧ ಅ.31ರಂದು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಅ.30ರಂದು ಪ್ರಕಟವಾಗಿದ್ದ ಆ ವರದಿಯಲ್ಲಿ ಎರ್ನಾಕುಲಂ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟಗಳಿಗೆ ಸಂಬಂಧಿಸಿದಂತೆ ಪೊಲೀಸರು ಹಲವು ಮುಸ್ಲಿಂ ಯುವಕರನ್ನು ಕೆಲವು ಗಂಟೆಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದರು ಎಂದು ಆರೋಪಿಸಲಾಗಿತ್ತು.
ಈ ವರದಿಗೆ ಸಂಬಂಧಿಸಿದಂತೆ ಕೋಯಿಕ್ಕೋಡ್ ಗ್ರಾಮೀಣ ಜಿಲ್ಲೆಯ ಪೊಲೀಸರು ಸೈದೀಕ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಗಲಭೆಯನ್ನು ಸೃಷ್ಟಿಸುವ ಉದ್ದೇಶದಿಂದ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ತೂಬ್ ಮೀಡಿಯಾ ಸಂಪಾದಕ ಅಸ್ಲಾಹ್ ಕಯ್ಯಲಕ್ಕತ್ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದ ಪೊಲೀಸರು, ಗುರುವಾರ ಅವರನ್ನು ವಿಚಾರಣೆಗೊಳಪಡಿಸಿದರು.
ಈ ನಡುವೆ, ಅಸ್ಲಾ ಕಯ್ಯಲಕ್ಕತ್ ವಿರುದ್ಧ ಕಠಿಣ ಸೆಕ್ಷನ್ ಗಳಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಬೆದರಿಕೆ ಒಡ್ಡಿದ್ದಾರೆ ಎಂದು ಸುದ್ದಿ ಜಾಲತಾಣದ ಉಪ ಸಂಪಾದಕ ಶಹೀನ್ ಅಬ್ದುಲ್ಲಾ ಆರೋಪಿಸಿದ್ದಾರೆ.
“ಮುಸ್ಲಿಮರ ಬಗೆಗಿನ ಪೊಲೀಸರ ಪಕ್ಷಪಾತಕ್ಕೆ ಈ ಎಫ್‌ಐಆರ್ ಸಾಕ್ಷಿಯಾಗಿದೆ” ಎಂದು Scroll ಸುದ್ದಿ ಸಂಸ್ಥೆಗೆ ತಿಳಿಸಿರುವ ಅವರು, “ಆ ವರದಿಯು ವಸ್ತುನಿಷ್ಠ ಹಾಗೂ ವಾಸ್ತವದಿಂದ ಕೂಡಿದ್ದರೂ, ನಮ್ಮ ಕೆಲಸವನ್ನು ಏಕಪಕ್ಷೀಯವಾಗಿ ಗುರಿಯಾಗಿಸಿಕೊಳ್ಳಲಾಗಿದೆ. ನಾವು ನಮ್ಮ ವಕೀಲರೊಂದಿಗೆ ಸಂಪರ್ಕದಲ್ಲಿದ್ದು, ಕಾನೂನು ಆಯ್ಕೆಯ ಬಗ್ಗೆ ಪರಿಶೀಲಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ನಾವು ನಮ್ಮ ವರದಿಗೆ ಬದ್ಧವಾಗಿರುತ್ತೇವೆ ಎಂದು ಸ್ಪಷ್ಟಪಡಿಸಿರುವ ಮಕ್ತೂಬ್ ಮೀಡಿಯಾ, “ಆ ವರದಿ ಮಾಡಿದ ವರದಿಗಾರನು ಪೊಲೀಸರ ನಿರಂಕುಶ ತನಿಖೆಗೊಳಗಾಗಿದ್ದಾನೆ. ನಾವು ಆ ವರದಿಗಾರನ ನೆರವಿಗೆ ಧಾವಿಸಿದ್ದು, ಸಂಸ್ಥೆಯ ವತಿಯಿಂದ ಕಾನೂನು ನೆರವು ಒದಗಿಸುವ ಭರವಸೆಯನ್ನು ನೀಡಲಾಗಿದೆ” ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಹೇಳಿದೆ.