ಉಪಕುಲಪತಿಗಳ ಆಯ್ಕೆಯಲ್ಲಿ ಸಿಎಂ ಹೊರಗಿಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋದ ಕೇರಳ ರಾಜ್ಯಪಾಲ
ತಿರುವನಂತಪುರಂ : ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಕೇರಳ ಡಿಜಿಟಲ್ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳ ಆಯ್ಕೆ ಪ್ರಕ್ರಿಯೆಯಿಂದ ಮುಖ್ಯಮಂತ್ರಿಯನ್ನು ಹೊರಗಿಡಬೇಕೆಂದು ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಕುಲಪತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿಗೆ ಯಾವುದೇ ಪಾತ್ರವನ್ನು ಯಾವುದೇ ವಿಶ್ವವಿದ್ಯಾಲಯಗಳು ನೀಡಿಲ್ಲ ಎಂದು ರಾಜ್ಯ ಸರಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಹೇಳಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯ ಮತ್ತು ಡಾ. ಸನತ್ ಕುಮಾರ್ ಘೋಷ್ ಹಾಗೂ ಇತರರ ನಡುವಿನ ಪ್ರಕರಣವನ್ನು ತಮ್ಮ ಅರ್ಜಿಯಲ್ಲಿ ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ರಾಜ್ಯಪಾಲರ ಅರ್ಜಿಯಲ್ಲಿ ಸಮಿತಿಯು ಸಿದ್ಧಪಡಿಸಿದ ಕಿರುಪಟ್ಟಿಯನ್ನು ಮುಖ್ಯಮಂತ್ರಿಯ ಬದಲು ನೇರವಾಗಿ ರಾಜ್ಯಪಾಲರಿಗೆ ಸಲ್ಲಿಸಬೇಕು ಎಂದು ವಾದಿಸಲಾಗಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಪಟ್ಟಿಯನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸಬೇಕೆಂದು ಆದೇಶಿಸಿತ್ತು.
ಈ ಎರಡು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಮುಖ್ಯಮಂತ್ರಿಗಳಿಗೆ ಯಾವುದೇ ಪಾತ್ರವಿಲ್ಲ. ಸಮಿತಿಯಲ್ಲಿ ಯುಜಿಸಿ ನಾಮನಿರ್ದೇಶಿತರನ್ನು ಸೇರಿಸಬೇಕೆಂದು ರಾಜ್ಯಪಾಲರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿದ್ದಾರೆ.