×
Ad

ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಆರೋಪಗಳನ್ನು ರೂಪಿಸಲು ಸಂತ್ರಸ್ತ ವ್ಯಕ್ತಿಯ ಹೇಳಿಕೆ ಸಾಕು: ಕೇರಳ ಹೈಕೋರ್ಟ್

Update: 2026-01-19 15:58 IST

ಕೇರಳ ಹೈಕೋರ್ಟ್ |  Photo Credit : PTI 

ಕೊಚ್ಚಿ,ಜ.19: ಮಹತ್ವದ ತೀರ್ಪೊಂದರಲ್ಲಿ ಕೇರಳ ಉಚ್ಚ ನ್ಯಾಯಾಲಯವು, ಇತರ ಸಾಕ್ಷಿಗಳ ಹೇಳಿಕೆಗಳು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ,2018ರ 3(1)(ಆರ್) ಮತ್ತು 3(1)(ಎಸ್) ಕಲಮ್‌ಗಳಡಿ ಅಪರಾಧಗಳ ಅಂಶಗಳನ್ನು ಬಹಿರಂಗಗೊಳಿಸುವುದಿಲ್ಲ ಎಂಬ ಏಕೈಕ ಕಾರಣದಿಂದಾಗಿ ಆರೋಪಿಯನ್ನು ದೋಷಮುಕ್ತಗೊಳಿಸುವಂತಿಲ್ಲ ಎಂದು ಎತ್ತಿ ಹಿಡಿದಿದೆ.

ನೊಂದ ವ್ಯಕ್ತಿಯ ಹೇಳಿಕೆಯು ಸ್ವತಃ ಮೇಲ್ನೋಟಕ್ಕೆ ಅಪರಾಧವನ್ನು ಬಹಿರಂಗಗೊಳಿಸಿದರೆ ಅದು ಕಾನೂನು ಕ್ರಮವನ್ನು ಮುಂದುವರಿಸಲು ಸಾಕಾಗುತ್ತದೆ ಎಂದು ನ್ಯಾ.ಎ.ಬದರುದ್ದೀನ್ ಸ್ವಷ್ಟ ಪಡಿಸಿದರು.

ಕಾನೂನಿಗೆ ಬಹು ಸಾಕ್ಷಿಗಳ ಅಗತ್ಯವಿಲ್ಲ ಮತ್ತು ಸಂಪೂರ್ಣ ವಿಶ್ವಾಸಾರ್ಹ ಏಕೈಕ ಸಾಕ್ಷಿಯ ಸಾಕ್ಷ್ಯವು ಸಾಕಾಗುತ್ತದೆ ಎಂದು ಹೇಳಿದ ನ್ಯಾಯಾಲಯವು, ಸಾಕ್ಷಿಗಳ ಹೇಳಿಕೆಗಳು ಪ್ರಾಸಿಕ್ಯೂಷನ್ ಪ್ರಕರಣವನ್ನು ಬೆಂಬಲಿಸದ ಕಾರಣ ತಾನು ಬಿಡುಗಡೆಗೆ ಅರ್ಹನಾಗಿದ್ದೇನೆ ಎಂಬ ಮೇಲ್ಮನವಿದಾರನ ವಾದವನ್ನು ತಿರಸ್ಕರಿಸಿತು.

ಕಲಂ 3(1)(ಆರ್) ಇತರ ಸಮುದಾಯದವರಿಂದ ಎಸ್‌ಸಿ/ಎಸ್‌ಟಿ ಸಮುದಾಯದ ಸದಸ್ಯರ ಉದ್ದೇಶಪೂರ್ವಕ ಅವಮಾನ ಅಥವಾ ಬೆದರಿಕೆಗೆ ಸಂಬಂಧಿಸಿದ್ದರೆ, ಕಲಂ 3(1)(ಎಸ್) ಜಾತಿಯ ಹೆಸರಿನಲ್ಲಿ ನಿಂದಿಸುವುದನ್ನು ಅಪರಾಧವೆಂದು ಪರಿಗಣಿಸುತ್ತದೆ.

ಬಿಡುಗಡೆ ಅರ್ಜಿಯನ್ನು ಪರಿಶೀಲಿಸುವಾಗ ಮೇಲ್ನೋಟಕ್ಕೆ ಪ್ರಕರಣವು ಅಸ್ತಿತ್ವದಲ್ಲಿದೆಯೇ ಅಥವಾ ಆರೋಪಗಳನ್ನು ರೂಪಿಸಲು ಅಗತ್ಯವಿರುವ ಕನಿಷ್ಠ ಒಂದಾದರೂ ಬಲವಾದ ಶಂಕಿತ ಅಂಶವಿದೆಯೇ ಎನ್ನುವುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವಾಗಿದೆ ಎಂದು ಹೈಕೋರ್ಟ್ ವಿವರಿಸಿತು.

ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿರದ ಆರೋಪಿಯು ಸಭೆಯೊಂದರಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಎದುರು ಸಂತ್ರಸ್ತೆಯನ್ನು ಜಾತಿಯ ಹೆಸರಿನಿಂದ ಕರೆದು ಅವಮಾನಿಸಿದ್ದಾಗಿ ಪ್ರಾಸಿಕ್ಯೂಷನ್ ಆರೋಪಿಸಿದೆ.

ಪ್ರಕರಣವು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಹೇಳಿದ್ದ ವಿಶೇಷ ನ್ಯಾಯಾಲಯವು ಆರೋಪಿಯ ಬಿಡುಗಡೆ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಆತ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News