×
Ad

Kerala Local Body Election Result: ಕ್ರೈಸ್ತರು ಮತ್ತು ವಕ್ಫ್ ಮಂಡಳಿ ನಡುವೆ ವಿವಾದದ ಕೇಂದ್ರಬಿಂದು ಮುನಂಬಮ್‌ನಲ್ಲಿ ಗೆದ್ದ ಎನ್‌ಡಿಎ

Update: 2025-12-13 16:43 IST

Photo Credit : indiatoday.in

ತಿರುವನಂತಪುರ: ಕೇರಳ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಎರ್ನಾಕುಳಂ ಜಿಲ್ಲೆಯ ಮುನಂಬಮ್‌ನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಎನ್‌ಡಿಎ ರಾಜ್ಯ ವಕ್ಫ್ ಮಂಡಳಿಗೆ ಸಂಬಂಧಿಸಿದ ದೀರ್ಘಕಾಲಿಕ ವಿವಾದದ ಕೇಂದ್ರಬಿಂದುವಾಗಿರುವ ಈ ವಾರ್ಡ್‌ನಲ್ಲಿ ಪ್ರಮುಖ ಅಧ್ಯಾಯವೊಂದನ್ನು ದಾಖಲಿಸಿದೆ. ವಕ್ಫ್ ತಮ್ಮ ಭೂಮಿಯ ಮೇಲೆ ಅಕ್ರಮ ಹಕ್ಕು ಸಾಧಿಸುತ್ತಿದೆ ಎಂದು ಆರೋಪಿಸುತ್ತಿರುವ ಮತ್ತು ತೆರವುಗೊಳಿಸಲ್ಪಡುವ ಬೆದರಿಕೆಯನ್ನು ಎದುರಿಸುತ್ತಿರುವ 500ಕ್ಕೂ ಅಧಿಕ ಕ್ರೈಸ್ತ ಕುಟುಂಬಗಳು ಕಳೆದೊಂದು ವರ್ಷದಿಂದಲೂ ನಡೆಸುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಚುನಾವಣಾ ಫಲಿತಾಂಶ ಹೊರಬಿದ್ದಿದೆ.

ಇದು ಎನ್‌ಡಿಎ ಪಾಲಿಗೆ ಐತಿಹಾಸಿಕ ಗೆಲುವು ಎಂದು ಬಣ್ಣಿಸಿರುವ ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನೂಪ್ ಆ್ಯಂಟನಿ ಜೋಸೆಫ್ ಅವರು, ಮೋದಿ ಸರಕಾರ ಮತ್ತು ಬಿಜೆಪಿ ವಕ್ಫ್ ವಿರುದ್ಧದ ಹೋರಾಟದಲ್ಲಿ ಮುನಂಬಮ್ ಜನರೊಂದಿಗೆ ನಿಂತಿವೆ ಮತ್ತು ಅವರು ಈಗ ತಮ್ಮ ಜನಾದೇಶವಾಗಿ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಈ ವಾರ್ಡ್‌ನ್ನು ಕಾಂಗ್ರೆಸ್ ಗೆದ್ದಿತ್ತು.

2019ರಲ್ಲಿ ಕೇರಳ ವಕ್ಫ್ ಮಂಡಳಿಯು 404 ಎಕರೆಗೂ ಹೆಚ್ಚಿನ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿದ ಬಳಿಕ ಮುನಂಬಮ್ ಪ್ರತಿಭಟನೆಗಳು ಮತ್ತು ನ್ಯಾಯಾಲಯಗಳಲ್ಲಿನ ಪ್ರಕರಣಗಳ ಕೇಂದ್ರಬಿಂದುವಾಗಿದೆ.

ಮುನಂಬಮ್‌ನ ವಿವಾದಿತ ಭೂಮಿಯಲ್ಲಿ ಸುಮಾರು 500 ಕುಟುಂಬಗಳು ವಾಸಿಸುತ್ತಿದ್ದು,ಹೆಚ್ಚಿನವರು ಕ್ರೈಸ್ತರಾಗಿದ್ದಾರೆ. ತೆರವು ಕಾರ್ಯಾಚರಣೆಯ ಭೀತಿಯನ್ನು ಎದುರಿಸುತ್ತಿರುವ ಈ ಕುಟುಂಬಗಳು ಕಳೆದ 400ಕ್ಕೂ ಅಧಿಕ ದಿನಗಳಿಂದ ಮುನಂಬಮ್ ಭೂಮಿ ಸಂರಕ್ಷಣಾ ಮಂಡಳಿಯ ಆಶ್ರಯದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿವೆ.

ತಮ್ಮ ಭೂ ಹಿಡುವಳಿಗಳ ಕಂದಾಯ ಹಕ್ಕನ್ನು ಮರುಸ್ಥಾಪಿಸುವಂತೆ ಈ ಜನರು ಒತ್ತಾಯಿಸಿದ್ದಾರೆ. ವಿವಾದಿತ ಭೂಮಿಯಲ್ಲಿ ವಾಸವಾಗಿರುವ ಕುಟುಂಬಗಳಿಂದ ಭೂ ತೆರಿಗೆಯನ್ನು ಸ್ವೀಕರಿಸುವುದನ್ನು ಸರಕಾರವು ನಿಲ್ಲಿಸಿತ್ತು.

ಈ ವರ್ಷದ ಪೂರ್ವಾರ್ಧದಲ್ಲಿ ಕೇಂದ್ರವು ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದಾಗ ಮುನಂಬಮ್‌ನ ಕ್ರೈಸ್ತ ನಿವಾಸಿಗಳ ಪ್ರತಿಭಟನೆಗಳು ದೇಶದ ಗಮನವನ್ನು ಸೆಳೆದಿದ್ದವು. ಕಾನೂನು ವಕ್ಫ್ ಆಸ್ತಿಗಳ ನಿಯಂತ್ರಣದಲ್ಲಿ ಸರಕಾರದ ಪಾತ್ರವನ್ನು ಹೆಚ್ಚಿಸಿದೆ.

ಆರಂಭದಲ್ಲಿ ಈ ಕುಟುಂಬಗಳು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದವು,ಆದರೆ ಅಂತಿಮವಾಗಿ ಮತದಾನದಲ್ಲಿ ಪಾಲ್ಗೊಂಡಿದ್ದವು.

ಮುನಂಬಮ್ ವಕ್ಫ್ ಆಸ್ತಿಯಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಶುಕ್ರವಾರ ತಡೆಹಿಡಿದಿರುವ ಸರ್ವೋಚ್ಚ ನ್ಯಾಯಾಲಯವು, ವಿವಾದಿತ ಭೂಮಿಗೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News