×
Ad

ತೆರಿಗೆ ಪಾಲಿನಲ್ಲಿ ಕೇಂದ್ರದಿಂದ ಅನ್ಯಾಯ ಆರೋಪ: ಜಂತರ್ ಮಂತರ್‌ನಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ಪ್ರತಿಭಟನೆ

Update: 2024-02-08 13:16 IST

Screengrab: X/ @PTI_NEWS

ಹೊಸದಿಲ್ಲಿ: ತೆರಿಗೆ ಪಾಲಿನಲ್ಲಿ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಸರಕಾರ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಒಕ್ಕೂಟ ನಿಧಿ ಹಂಚಿಕೆಯಲ್ಲಿ ತಾರತಮ್ಯವೆಸಗುತ್ತಿದೆ ಎಂದು ಆರೋಪಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಂತರ್ ಮಂತರ್‌ನಲ್ಲಿ ಎಲ್‌ಡಿಎಫ್ ಮೈತ್ರಿಕೂಟದ ನಾಯಕರು ಹಾಗೂ ಶಾಸಕರು, ಸಂಸದರು ನಡೆಸುತ್ತಿರುವ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಿಣರಾಯಿ ವಿಜಯನ್, "ಈ ಪ್ರತಿಭಟನೆಯು ಉತ್ತರ-ದಕ್ಷಿಣ ಎಂಬ ವಿಭಜನೆಗೆ ಕಾರಣವಾಗಲಿದೆ" ಎಂಬ ಪ್ರತಿಪಾದನೆಯನ್ನು ತಳ್ಳಿ ಹಾಕಿದರು. ನಮ್ಮ ರಾಜ್ಯದ ಹಿತಾಸಕ್ತಿಯನ್ನೂ ಪರಿಗಣಿಸಬೇಕು ಎಂಬುದನ್ನು ಖಾತರಿಗೊಳಿಸಲು ನಾವು ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

"ನಾವು ಈ ತಾರತಮ್ಯದ ವಿರುದ್ಧ ನಮ್ಮ ಪ್ರತಿಭಟನೆಯನ್ನು ದಾಖಲಿಸಲು ಹಾಗೂ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಸಂರಕ್ಷಿಸಲು ಇಲ್ಲಿ ನೆರೆದಿದ್ದೇವೆ. ನಾವು ನವೀಕರಣಗೊಂಡಿರುವ ಹೋರಾಟಕ್ಕೆ ಇಂದು ಮುನ್ನುಡಿ ಬರೆದಿದ್ದು, ಈ ಹೋರಾಟವು ಎಲ್ಲ ರಾಜ್ಯಗಳನ್ನೂ ಸಮಾನವಾಗಿ ಉಪಚರಿಸುವ ದಿನಕ್ಕೆ ನಾಂದಿ ಹಾಡಲಿದೆ" ಎಂದೂ ಅವರು ಹೇಳಿದರು.

ಪ್ರತಿಭಟನೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಡಿಎಂಕೆ ನಾಯಕರಾದ ತಿರುಚಿ ಶಿವ ಮತ್ತು ಪಳನಿವೇಲ್ ತ್ಯಾಗರಾಜನ್, ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹಾಗೂ ಸಿಪಿಐ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ‌.ರಾಜಾ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News