ಕೊಲ್ಕತ್ತಾ: ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಪ್ರಕರಣ ದಾಖಲು
PC: x.com/ndtv
ಕೊಲ್ಕತ್ತಾ: ಶುಕ್ರವಾರ ರಾತ್ರಿ ಅಜ್ಜಿಯ ಪಕ್ಕ ನಿದ್ರಿಸುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ಕೊಲ್ಕತ್ತಾ ಸಮೀಪದ ಹೂಗ್ಲಿಯಲ್ಲಿ ನಡೆದಿದೆ.
ಬಂಜಾರಾ ಸಮುದಾಯಕ್ಕೆ ಸೇರಿದ ಬಾಲಕಿ ತಾರಕೇಶ್ವರ ರೈಲ್ವೆ ಶೆಡ್ ನಲ್ಲಿ ಸೊಳ್ಳೆಪರದೆಯಡಿ ಮಂಚದಲ್ಲಿ ಅಜ್ಜಿಯ ಜತೆ ಮಲಗಿದ್ದಳು. ಮಗುವಿನ ಸೊಳ್ಳೆಪರದೆಯನ್ನು ಕತ್ತರಿಸಿ ಮಗುವನ್ನು ಅಪಹರಿಸಲಾಗಿದೆ ಎಂದು ಹೂಗ್ಲಿ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ತಾರಕೇಶ್ವರ ರೈಲು ನಿಲ್ದಾಣದ ಬಳಿಯ ಚರಂಡಿಯಲ್ಲಿ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.
"ಮಗು ನನ್ನೊಂದಿಗೆ ಮಲಗಿತ್ತು. ಬಳಿಕ ಯಾರೋ ಆಕೆಯನ್ನು ಅಪಹರಿಸಿದ್ದಾರೆ. ಮಗುವನ್ನು ಯಾವಾಗ ಒಯ್ಯಲಾಗಿದೆ ಎಂದು ನಿಖರವಾಗಿ ಗೊತ್ತಿಲ್ಲ. ಯಾರು ಅಪಹರಿಸಿದ್ದಾರೆ ಎಂದೂ ತಿಳಿದಿಲ್ಲ. ಸೊಳ್ಳೆಪರದೆಯನ್ನು ಕತ್ತರಿಸಿ ಮಗುವನ್ನು ಅಪಹರಿಸಲಾಗಿದೆ. ಬಾಲಕಿ ನಗ್ನವಾಗಿ ಪತ್ತೆಯಾಗಿದ್ದಾಳೆ" ಎಂದು ಸಂತ್ರಸ್ತೆಯ ಅಜ್ಜಿ ವಿವರಿಸಿದ್ದಾರೆ.
"ನಮ್ಮ ಮನೆಯನ್ನು ಧ್ವಂಸಗೊಳಿಸಿರುವುದರಿಂದ ನಾವು ರಸ್ತೆ ಬದಿ ವಾಸವಿದ್ದೇವೆ. ನಾವೆಲ್ಲಿಗೆ ಹೋಗಬೇಕು? ನಮಗೆ ಮನೆ ಇಲ್ಲ" ಎಂದು ಒತ್ತರಿಸಿ ಬರುವ ಕಣ್ಣೀರು ನಿಯಂತ್ರಿಸಿಕೊಳ್ಳುತ್ತಾ ಹೇಳಿದರು.
ತೀವ್ರ ಅಸ್ವಸ್ಥವಾಗಿರುವ ಮಗುವಿಗೆ ತಾರಕೇಶ್ವರ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.