×
Ad

ಕುಟುಂಬವೂ ಬೇಡ,ರಾಜಕೀಯವೂ ಬೇಡ: ಆರ್‌ಜೆಡಿ ಸೋಲಿನ ಬಳಿಕ ಲಾಲು ಪುತ್ರಿ

Update: 2025-11-15 19:27 IST

Photo: indianexpress

ಪಾಟ್ನಾ,ನ.15: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿಯ ಹೀನಾಯ ಸೋಲಿನ ಬೆನ್ನಲ್ಲೇ ಬಾಂಬೊಂದನ್ನು ಸಿಡಿಸಿರುವ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ತಾನು ತನ್ನ ಕುಟುಂಬದೊಂದಿಗೆ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇನೆ ಮತ್ತು ರಾಜಕೀಯವನ್ನು ತೊರೆಯುತ್ತಿದ್ದೇನೆ ಎಂದು ಶನಿವಾರ ಘೋಷಿಸಿದ್ದಾರೆ.

‘ನಾನು ರಾಜಕೀಯವನ್ನು ತೊರೆಯುತ್ತಿದ್ದೇನೆ ಮತ್ತು ಕುಟುಂಬದೊಂದಿಗೆ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇನೆ. ಸೋದರ ತೇಜಸ್ವಿ ಯಾದವ್‌ರ ಆಪ್ತ ಹಾಗೂ ಹಿರಿಯ ಆರ್‌ಜೆಡಿ ನಾಯಕ ಸಂಜಯ ಯಾದವ್‌ ಮತ್ತು ರಮೀಝ್ ನನಗೆ ಹೀಗೆ ಮಾಡುವಂತೆ ಸೂಚಿಸಿದ್ದಾರೆ ಮತ್ತು ಎಲ್ಲ ಆರೋಪಗಳನ್ನು ನಾನು ಹೊತ್ತುಕೊಳ್ಳುತ್ತೇನೆ ’ ಎಂದು ರೋಹಿಣಿ ಬರೆದಿದ್ದಾರೆ. ಆದರೆ ಅವರು ಬಿಹಾರ ಚುನಾವಣಾ ಸೋಲನ್ನು ಅಥವಾ ಬೇರೆ ಯಾವುದನ್ನೋ ಉಲ್ಲೇಖಿಸಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಲಾಲು ಕುಟುಂಬದಿಂದ ಪರಿತ್ಯಕ್ತರಾಗಿರುವ ತೇಜ್ ಪ್ರತಾಪ್ ಯಾದವ್‌ ಸ್ಥಾಪಿಸಿದ ಜನಶಕ್ತಿ ಜನತಾ ದಳ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿತ್ತು ಮತ್ತು ಅದು ರಾಘೋಪುರ ಕ್ಚೇತ್ರದಲ್ಲಿ ತೇಜಸ್ವಿ ಯಾದವ್‌ ಎದುರು ತನ್ನ ಅಭ್ಯರ್ಥಿಯನ್ನೂ ಕಣಕ್ಕಿಳಿಸಿತ್ತು. ಆದರೆ ತೇಜ್ ಪ್ರತಾಪ್ ಸ್ಪರ್ಧಿಸಿದ್ದ ಮಹುವಾ ಸೇರಿದಂತೆ ಒಂದೇ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಪಕ್ಷವು ವಿಫಲಗೊಂಡಿದೆ.

ಪಕ್ಷದಿಂದ ಮತ್ತು ಕುಟುಂಬದಿಂದ ತೇಜ್ ಪ್ರತಾಪ್ ಉಚ್ಚಾಟನೆಯಿಂದ ಅಸಮಾಧಾನಗೊಂಡಿದ್ದರು ಎನ್ನಲಾಗಿರುವ ರೋಹಿಣಿ ಚುನಾವಣೆಗೆ ಮೊದಲೂ ಪಕ್ಷದ ಬಗ್ಗೆ ತನ್ನ ಹತಾಶೆಯನ್ನು ವ್ಯಕ್ತಪಡಿಸುತ್ತಲೇ ಇದ್ದರು, ಆದರೂ ಹೊಂದಾಣಿಕೆಯ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದರು.

ಸೆಪ್ಟೆಂಬರ್‌ ನಲ್ಲಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲ ರಾಜಕೀಯ ನಾಯಕರು ಮತ್ತು ಕುಟುಂಬ ಸದಸ್ಯರನ್ನು ಅನ್-ಫಾಲೋ ಮಾಡಿದ್ದರು ಮತ್ತು ತನ್ನ ವಿರುದ್ಧ ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದರು.

‘ದುರಾಲೋಚನೆಗಳನ್ನು ಹೊಂದಿರುವವರು ಮತ್ತು ಅಂಥಹವರನ್ನು ಉತ್ತೇಜಿಸುವ ಎಲ್ಲರಿಗೂ ನಾನು ಬಹಿರಂಗವಾಗಿ ಸವಾಲು ಹಾಕುತ್ತೇನೆ. ನನಗಾಗಿ ಅಥವಾ ಬೇರೆ ಯಾರಿಗಾಗಿ ಆಗಲೂ ನಾನು ಎಂದಾದರೂ ಏನನ್ನಾದರೂ ಕೋರಿದ್ದೆ ಮತ್ತು ನಾನು ನನ್ನ ತಂದೆಗೆ ಮೂತ್ರಪಿಂಡ ದಾನ ಮಾಡಿದ್ದೇನೆ ಎನ್ನುವುದು ಸುಳ್ಳು ಎಂದು ಯಾರಾದರೂ ಸಾಬೀತು ಮಾಡಿದರೆ ನಾನು ರಾಜಕೀಯ ಮತ್ತು ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತೇನೆ’ ಎಂದು ರೋಹಿಣಿ ಎಕ್ಸ್‌ನಲ್ಲಿ ಬರೆದಿದ್ದರು. ರೋಹಿಣಿ 2022ರಲ್ಲಿ ತನ್ನ ತಂದೆಗೆ ಮೂತ್ರಪಿಂಡ ದಾನ ಮಾಡಿದ್ದರು.

‘ಆರೋಪಗಳನ್ನು ಮಾಡುವವರಿಗೆ ತಮ್ಮ ಸುಳ್ಳುಗಳು ಮತ್ತು ಅಪಪ್ರಚಾರವನ್ನು ಸಾಬೀತು ಮಾಡಲು ಸಾಧ್ಯವಾಗದಿದ್ದರೆ ಅವರು ಬಹಿರಂಗವಾಗಿ ನನ್ನ ಮತ್ತು ಈ ದೇಶದ ಪ್ರತಿಯೊಬ್ಬ ಹೆಣ್ಣಮಕ್ಕಳ ಕ್ಷಮೆಯನ್ನು ಯಾಚಿಸಬೇಕು ’ ಎಂದಿದ್ದರು.

ಆದಾಗ್ಯೂ ನ.9ರಂದು ತೇಜಸ್ವಿ ಯಾದವ್‌ ಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದ ರೋಹಿಣಿ ಅವರನ್ನು ಮತ್ತು ಅವರ ನಾಯಕತ್ವವನ್ನು ಪ್ರಶಂಸಿಸಿದ್ದರು. ಅವರ ಇತ್ತೀಚಿನ ಪೋಸ್ಟ್‌ಗಳು ಪಕ್ಷವನ್ನು ಬೆಂಬಲಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News