×
Ad

ಸುಧೀರ್ಘ ಅವಧಿಯ ಒಪ್ಪಿತ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ: ಮದ್ರಾಸ್ ಹೈಕೋರ್ಟ್

Update: 2025-01-26 07:56 IST

PC : x.com/barandbench

ಚೆನ್ನೈ: ಇಬ್ಬರು ವಯಸ್ಕರ ನಡುವೆ ಸುಧೀರ್ಘ ಕಾಲದಿಂದ ಒಪ್ಪಿತ ಲೈಂಗಿಕ ಸಂಬಂಧವಿದ್ದಲ್ಲಿ, "ವಿವಾಹವಾಗುವ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾನೆ" ಎಂಬ ಕಾರಣಕ್ಕೆ ಪುರುಷನಿಗೆ ಶಿಕ್ಷೆ ವಿಧಿಸುವುದು ನ್ಯಾಯಸಮ್ಮತವಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

ಈ ಸಂಬಂಧ 2022ರಲ್ಲಿ ವಿಳ್ಳುಪುರಂ ಮಹಿಳಾ ನ್ಯಾಯಾಲಯ 26 ವರ್ಷದ ವ್ಯಕ್ತಿಯೊಬ್ಬರಿಗೆ ನೀಡಿದ್ದ ಶಿಕ್ಷೆಯನ್ನು ನ್ಯಾಯಮೂರ್ತಿ ಸುಂದರ್ ಮೋಹನ್ ರದ್ದುಪಡಿಸಿದ್ದಾರೆ. "ಸುಧೀರ್ಘ ಅವಧಿಯಿಂದ ಇದ್ದ ಒಪ್ಪಿತ ಲೈಂಗಿಕ ಸಂಬಂಧ ಕೆಟ್ಟಿರುವುದು ಮಾತ್ರ ಪುರಾವೆಗಳಿಂದ ತಿಳಿದು ಬರುತ್ತದೆ. ಆದ್ದರಿಂದ ಭಾರತೀಯ ದಂಡಸಂಹಿತೆ ಸೆಕ್ಷನ್ 376 ಮತ್ತು 147ರ ಅಡಿಯಲ್ಲಿ ಶಿಕ್ಷೆ ನೀಡಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

"ದೂರು ನೀಡುವ ಸಂದರ್ಭದಲ್ಲಿ 24 ವರ್ಷ ವಯಸ್ಸಾಗಿದ್ದ ಮಹಿಳೆ ಅಪರಾಧದ ದೂರು ನೀಡಿದ್ದು, ತನ್ನ ವರ್ತನೆಯ ಪರಿಣಾಮಗಳ ಬಗ್ಗೆ ಅವರಿಗೆ ಅರಿವು ಇದ್ದಿರಬೇಕು. ಕೇವಲ ವಿವಾಹವಾಗುವ ಸುಳ್ಳು ಭರವಸೆಯ ಕಾರಣದಿಂದ ಆಕೆ ಲೈಂಗಿಕತೆಗೆ ಒಪ್ಪಿಗ ನೀಡಿದ್ದಾಳೆ ಎನ್ನಲಾಗದು. ಸಂತ್ರಸ್ತೆ ಮುಗ್ಧೆ ಅಥವಾ ಮೋಸಹೋದವಳು ಎನಿಸುವುದಿಲ್ಲ" ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

"ಮೇಲ್ಮನವಿ ಸಲ್ಲಿಸಿದ ವ್ಯಕ್ತಿ ವಿವಾಹವಾಗುವ ಆಶ್ವಾಸನೆ ನೀಡಿ ಲೈಂಗಿಕ ಸಂಭೋಗ ನಡೆಸಿದ್ದಾನೆ ಎಂದು ಮೊದಲ ಬಾರಿಗೆ 25 ತಿಂಗಳ ಬಳಿಕ ದೂರು ನೀಡಲಾಗಿದೆ. ಈ ಪ್ರಕರಣದಲ್ಲಿ ವಿಳಂಬಕ್ಕೆ ಅತ್ಯಂತ ಮಹತ್ವವಿದೆ" ಎಂದು ವಿಶ್ಲೇಷಿಸಿದ್ದಾರೆ.

ಇತರ ಸಾಕ್ಷಿಗಳ ಪುರಾವೆಗಳಿಂದ ತಿಳಿದುಬರುವಂತೆ, ಮೇಲ್ಮನವಿ ಸಲ್ಲಿಸಿದ ವ್ಯಕ್ತಿ ಮತ್ತು ಸಂತ್ರಸ್ತೆ ನಿಕಟ ಸಂಬಂಧ ಹೊಂದಿದ್ದರು. ಆದ್ದರಿಂದ ಸುಳ್ಳು ಭರವಸೆ ನೀಡಿ ಲೈಂಗಿಕ ಕ್ರಿಯೆ ಎಸಗಿದ ಬಗ್ಗೆ ಸಾಕ್ಷಿಗಳು ಲಭ್ಯವಿಲ್ಲ. ವಿಳ್ಳುಪುರಂ ಮಹಿಳಾ ಕೋರ್ಟ್ 2022ರ ಡಿಸೆಂಬರ್ 9ರಂದು ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸುತ್ತಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News