ಮೂತ್ರ ವಿಸರ್ಜನೆ ಪ್ರಕರಣ| ಪಕ್ಷ ತೊರೆದ ಬಿಜೆಪಿ ನಾಯಕ; ಸ್ಥಳೀಯ ಶಾಸಕನ ವಿರುದ್ಧ ಟೀಕಾ ಪ್ರಹಾರ
ಭೋಪಾಲ್: ಆದಿವಾಸಿ ಯುವಕನ ಮೇಲೆ ಬಿಜೆಪಿ ನಾಯಕನೊಬ್ಬ ಮೂತ್ರ ವಿಸರ್ಜಿಸಿದ್ದ ಘಟನೆಗೆ ಸಂಬಂಧಿಸಿದಂತೆ ಸಿದ್ಧಿ ಜಿಲ್ಲೆಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ವಿವೇಕ್ ಕೋಲ್ ಪಕ್ಷ ತೊರೆದಿದ್ದು, ಸ್ಥಳೀಯ ಶಾಸಕನ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಕಳೆದ ವಾರ ಪ್ರವೇಶ್ ಶುಕ್ಲಾ ಎಂಬ ವ್ಯಕ್ತಿ, ದಶ್ಮೇಶ್ ರಾವತ್ ಎಂಬ ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬಳಿಕ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತ್ರಸ್ತನ ಪಾದ ಪೂಜೆ ಮಾಡಿದ್ದರು.
ನಾನು ನನ್ನ ರಾಜಿನಾಮೆ ಪತ್ರವನ್ನು ಮಧ್ಯಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ.ಶರ್ಮಾಗೆ ಈಮೇಲ್ ಮೂಲಕ ರವಾನಿಸಿದ್ದೇನೆ. ನನ್ನ ನಿರ್ಧಾರವನ್ನು ಮರುಪರಿಗಣಿಸಿ, ನನ್ನ ನಿರ್ಧಾರವನ್ನು ಹಿಂಪಡೆಯುವಂತೆ ಪಕ್ಷದ ನಾಯಕತ್ವ ಕೋರಿದ್ದರೂ ನನ್ನ ರಾಜಿನಾಮೆ ನಿರ್ಧಾರವೇ ಅಂತಿಮ ಎಂದು ವಿವೇಕ್ ಕೋಲ್ PTI ಸುದ್ದಿ ಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.
"ನನ್ನ ರಾಜಿನಾಮೆ ಅಂತಿಮ. ನಾನದನ್ನು ಎರಡು ದಿನಗಳ ಹಿಂದೆ ಮಧ್ಯಪ್ರದೇಶ ಬಿಜೆಪಿಯ ಮುಖ್ಯಸ್ಥರಾದ ವಿ.ಡಿ.ಶರ್ಮ ಅವರಿಗೆ ಈಮೇಲ್ ಮೂಲಕ ರವಾನಿಸಿದ್ದೇನೆ. ನಾನದನ್ನು ಬಿಜೆಪಿ ಪದಾಧಿಕಾರಿಗಳ ವಾಟ್ಸ್ ಆ್ಯಪ್ ಗುಂಪಿನಲ್ಲೂ ಹಂಚಿಕೊಂಡಿದ್ದೇನೆ. ನನ್ನ ರಾಜಿನಾಮೆಯನ್ನು ಹಿಂಪಡೆಯುವಂತೆ ಪಕ್ಷವು ಕೋರಿಲ್ಲ" ಎಂದು ವಿವೇಕ್ ಕೋಲ್ ಹೇಳಿದ್ದಾರೆ.
ವಿವೇಕ್ ಕೋಲ್ ಅವರು ತಮ್ಮ ರಾಜಿನಾಮೆ ಪತ್ರದಲ್ಲಿ ಸಿದ್ಧಿ ಕ್ಷೇತ್ರದ ಬಿಜೆಪಿ ಶಾಸಕ ಕೇದಾರ್ ಶುಕ್ಲಾ ವಿರುದ್ಧವೂ ಟೀಕಾ ಪ್ರಹಾರ ನಡೆಸಿದ್ದು, ಆದಿವಾಸಿ ಸಮುದಾಯದ ಜಮೀನು ಅತಿಕ್ರಮಣ ಹಾಗೂ ಜಿಲ್ಲೆಯಲ್ಲಿನ ಇನ್ನಿತರ ದೌರ್ಜನ್ಯಗಳು ಸೇರಿದಂತೆ ಕಳೆದ ಎರಡು ವರ್ಷಗಳಲ್ಲಿನ ಅವರ ಕೃತ್ಯಗಳಿಂದ ನನಗೆ ನೋವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಈಗ ಆದಿವಾಸಿ ಯುವಕನ ಮೇಲಿನ ಮೂತ್ರ ವಿಸರ್ಜನೆ ಪ್ರಕರಣದ ಆರೋಪಿಯಾಗಿರುವ ವ್ಯಕ್ತಿಯು ಅವರ ಪ್ರತಿನಿಧಿ ಎಂಬುದು ನನ್ನನ್ನು ಮತ್ತಷ್ಟು ಘಾಸಿಗೊಳಿಸಿದೆ ಎಂದೂ ವಿವೇಕ್ ಕೋಲ್ ಹೇಳಿದ್ದಾರೆ.
ಆದರೆ, ಆರೋಪಿಯೊಂದಿಗೆ ಶಾಸಕ ಕೇದಾರ್ ಶುಕ್ಲಾಗೆ ಸಂಬಂಧವಿದೆ ಎಂಬ ಆರೋಪಗಳನ್ನು ಬಿಜೆಪಿ ಅಲ್ಲಗಳೆದಿದೆ.