×
Ad

ಮಧ್ಯಪ್ರದೇಶ: ಗುಂಪಿನ ಮೇಲೆ ಟ್ರಕ್ ನುಗ್ಗಿಸಿದ ಪಾನಮತ್ತ ಚಾಲಕ; ಮೂವರು ಮೃತ್ಯು, ಹಲವರು ಗಂಭೀರ

Update: 2025-09-16 07:52 IST

 PC: x.com/ndtvfeed

ಇಂದೋರ್: ಪಾನಮತ್ತ ಚಾಲಕನೊಬ್ಬ ಪಾದಚಾರಿಗಳು ಮತ್ತು ವಾಹನಗಳ ಮೇಲೆ ಟ್ರಕ್ ನುಗ್ಗಿಸಿ ಸಂಭವಿಸಿದ ದುರಂತದಲ್ಲಿ ಕನಿಷ್ಠ ಮೂವರು ಮೃತಪಟ್ಟು, ಹಲವು ಮಂದಿ ತೀವ್ರ ಗಾಯಗೊಂಡಿದ್ದಾರೆ. ಸೋಮವಾರ ಸಂಜೆ ನಡೆದ ಈ ಭಯಾನಕ ಘಟನೆಯ ಚಿತ್ರಣವನ್ನು ಪ್ರತ್ಯಕ್ಷದರ್ಶಿಗಳು ಬಿಚ್ಚಿಟ್ಟಿದ್ದು, ರಸ್ತೆ ತುಂಬೆಲ್ಲ ದೇಹಗಳು ಬಿದ್ದಿದ್ದು, ನೋವಿನಿಂದ ಚೀರುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು ಎಂದು ಹೇಳಿದ್ದಾರೆ.

ಹಲವು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ರಸ್ತೆಯ ಶಿಕ್ಷಕ ನಗರದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರಕ್, ಜನರ ಗುಂಪು ಮತ್ತು 10ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಚಾಲನ ಮಿತಿ ಮೀರಿ ಮದ್ಯ ಸೇವಿಸಿದ್ದ. ರಾಮಚಂದ್ರನಗರ ತಿರುವಿನಲ್ಲಿ ಎರಡು ಬೈಕ್ ಗಳಿಗೆ ಈ ಟ್ರಕ್ ಢಿಕ್ಕಿ ಹೊಡೆದ ಟ್ರಕ್, ಅವುಗಳನ್ನು ಎಳೆದುಕೊಂಡು ಬಂದಿದೆ. ಬಳಿಕ ಬಡಾ ಗಣಪತಿ ಪ್ರದೇಶದಲ್ಲಿ ಜನಸಮೂಹದ ಮೇಲೆ ನುಗ್ಗಿದೆ" ಎಂದು ಡಿಸಿಪಿ ಕೃಷ್ಣ ಲಾಲ್‌ಚಾಂದನಿ ಹೇಳಿದ್ದಾರೆ. ತಕ್ಷಣವೇ ಚಾಲಕನನ್ನು ಬಂಧಿಸಿ, ಮಲ್ಹಾರಗಂಜ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ವಿವರಿಸಿದ್ದಾರೆ.

ಹಲವು ದೇಹಗಳು ಜರ್ಜರಿತವಾಗಿದ್ದು, ಅಂಗಾಂಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ಥಳೀಯ ನಿವಾಸಿಗಳು ಮತ್ತು ದಾರಿಹೋಕರು ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಗೊಂದಲದ ನಡುವೆಯೇ ಟ್ರಕ್ ಗೆ ಬೆಂಕಿ ಹತ್ತಿಕೊಂಡಿದೆ. ಉದ್ರಿಕ್ತರು ಟ್ರಕ್ ಗೆ ಬೆಂಕಿ ಹಚ್ಚಿದರು ಎಂದು ಆರಂಭಿಕ ವರದಿಗಳು ಹೇಳಿದ್ದರೂ, ಮೊದಲ ಢಿಕ್ಕಿಯಲ್ಲಿ ಸಿಕ್ಕಿಹಾಕಿಕೊಂಡು ನಜ್ಜುಗುಜ್ಜಾಗಿ ಲಾರಿಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಬೈಕ್ ನ ಪೆಟ್ರೋಲ್ ಟ್ಯಾಂಕ್ ಸ್ಫೋಟಿಸಿ ಬೆಂಕಿ ಹತ್ತಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಸ್ಪಷ್ಟಪಡಿಸಿದ್ದಾರೆ.

ಈ ಬೆಂಕಿ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಪೊಲೀಸರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಇಂದೋರ್ ನಗರದಾದ್ಯಂತ ಎಲ್ಲ ಆಸ್ಪತ್ರೆಗಳಿಗೆ ಕಟ್ಟೆಚ್ಚರ ವಿಧಿಸಲಾಗಿದೆ. ಎರಡು ದೇಹಗಳನ್ನು ಜಿಲ್ಲಾ ಆಸ್ಪತ್ರೆಗೆ ಒಯ್ಯಲಾಗಿದ್ದು, ಮಹಾರಾಜಾ ಯಶವಂತ ರಾವ್ ಅವರು ತಮ್ಮ ಆಸ್ಪತ್ರೆಯ ತುರ್ತು ನಿಗಾ ವಾರ್ಡ್ ನಲ್ಲಿ ಎಲ್ಲ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಬೆಡ್ಗ ಳನ್ನು ಕಾಯ್ದಿರಿಸಿದ್ದಾರೆ. ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News