×
Ad

Madhya Pradesh| 18 ವರ್ಷದ ಯುವಕನನ್ನು ಅಪಹರಿಸಿ ಥಳಿತ, ಮೂತ್ರ ಕುಡಿಯುವಂತೆ ಬಲವಂತ

Update: 2026-01-19 10:59 IST

ಭೋಪಾಲ್: ಯುವಕನೊರ್ವನ ಮೇಲೆ ನಡೆದ ಭೀಕರ ದೌರ್ಜನ್ಯ ಪ್ರಕರಣವೊಂದು ರಾಜಸ್ಥಾನದಿಂದ ಬೆಳಕಿಗೆ ಬಂದಿದೆ.  ಈ ಘಟನೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಭೋಪಾಲ್‌ನ ಕೋಲಾರ ಪ್ರದೇಶದ ನಿವಾಸಿಯಾಗಿರುವ 18 ವರ್ಷದ ಸೋನು ಎಂಬ ಯುವಕನನ್ನು ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿ ಅಪಹರಿಸಿ, ಮೂರು ದಿನಗಳ ಕಾಲ ಅಕ್ರಮವಾಗಿ ಕೂಡಿಹಾಕಿ ಅಮಾನವೀಯವಾಗಿ ಚಿತ್ರಹಿಂಸೆ ನೀಡಲಾಗಿದೆ. ಈ ದಾಳಿಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ವೈರಲ್ ವೀಡಿಯೊದಲ್ಲಿ ಸೋನು ಮೇಲೆ ಹಲವರು ನಿರ್ದಯವಾಗಿ ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು, ಅತ್ಯಂತ ಅವಮಾನಕರ ಕೃತ್ಯವಾಗಿ ಬಿಯರ್ ಬಾಟಲಿಯಿಂದ ಮೂತ್ರ ಕುಡಿಯುವಂತೆ ಬಲವಂತಪಡಿಸಿರುವ ದೃಶ್ಯಗಳು ದಾಖಲಾಗಿವೆ ಎಂದು ವರದಿಯಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಸೋನು ರಾಜಸ್ಥಾನದ ಝಲಾವರ್ ಜಿಲ್ಲೆಯ ಪುಲೋರೋ ಗ್ರಾಮದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು. ಸುಮಾರು 15 ದಿನಗಳ ಹಿಂದೆ ಆ ಮಹಿಳೆ ತನ್ನ ಮನೆಯನ್ನು ತೊರೆದು ಭೋಪಾಲ್‌ಗೆ ಬಂದು, ಸೋನು ಜೊತೆ ವಾಸಿಸುತ್ತಿದ್ದಳು. ಬಳಿಕ ಕುಟುಂಬದ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಆಕೆ ಮತ್ತೆ ರಾಜಸ್ಥಾನಕ್ಕೆ ಮರಳಿದ್ದಾಳೆ. ಅದಾದ ಕೆಲವೇ ದಿನಗಳಲ್ಲಿ ಆ ಮಹಿಳೆಯಿಂದ ಸೋನುಗೆ ದೂರವಾಣಿ ಕರೆ ಬಂದಿದ್ದು, ರಾಜಸ್ಥಾನಕ್ಕೆ ಬಂದು ಭೇಟಿಯಾಗುವಂತೆ ಕೇಳಿಕೊಂಡಿದ್ದಾಳೆ. ಆ ಕರೆಯನ್ನು ನಂಬಿ ಸೋನು ಪುಲೋರೋ ಗ್ರಾಮಕ್ಕೆ ತೆರಳಿದ್ದನು. ಆದರೆ ಭೇಟಿಯ ಬದಲು ಅವನ ಮೇಲೆ ಪೂರ್ವನಿಯೋಜಿತ ಹೊಂಚುದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಗ್ರಾಮಕ್ಕೆ ತಲುಪಿದ ತಕ್ಷಣ ಮಹಿಳೆಯ ಕುಟುಂಬದ ಸದಸ್ಯರು ಸೋನು ಅವರನ್ನು ಅಪಹರಿಸಿ, ತಮ್ಮ ಮನೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿದರು ಎಂದು ಆರೋಪಿಸಲಾಗಿದೆ. ನಂತರ ಗಂಟೆಗಟ್ಟಲೆ ಅವರ ಮೇಲೆ ನಿರಂತರ ಹಾಗೂ ಕ್ರೂರ ಹಿಂಸೆ ನಡೆಸಲಾಗಿದೆ.

ಪೊಲೀಸರ ಪ್ರಕಾರ, ಸೋನು ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ. ಅವಮಾನಗೊಳಿಸುವ ಉದ್ದೇಶದಿಂದ ಬಲವಂತವಾಗಿ ಮೂತ್ರ ಕುಡಿಸಲಾಗಿದೆ. ಈ ಸಂಪೂರ್ಣ ಕೃತ್ಯವನ್ನು ವೀಡಿಯೊ ಚಿತ್ರೀಕರಣ ಮಾಡಲಾಗಿದೆ. ನಂತರ ಈ ವೀಡಿಯೊವನ್ನು ಭೋಪಾಲ್‌ನಲ್ಲಿರುವ ಸೋನು ಕುಟುಂಬಕ್ಕೆ ಕಳುಹಿಸಲಾಗಿದೆ. ತಕ್ಷಣವೇ ಅವರು ಕೋಲಾರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಸಹಾಯ ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ರಾಜಸ್ಥಾನದಲ್ಲಿ ನಡೆದಿದೆ ಎಂಬುದನ್ನು ಕೋಲಾರ ಪೊಲೀಸರು ದೃಢಪಡಿಸಿದ್ದು, ಸಂತ್ರಸ್ತನ ಸುರಕ್ಷತೆಯೇ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ. “ವಿಶೇಷ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ. ರಾಜಸ್ಥಾನ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸಂತ್ರಸ್ತನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ವೈರಲ್ ವೀಡಿಯೊವನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಇನ್ಸ್‌ಪೆಕ್ಟರ್ ಸಂಜಯ್ ಸೋನಿ ತಿಳಿಸಿದ್ದಾರೆ.

ದಾಳಿಯಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಗುರುತಿಸುವ ಕಾರ್ಯ ಮುಂದುವರಿದಿದ್ದು, ಅಪಹರಣ, ಕಾನೂನುಬಾಹಿರ ಬಂಧನ, ಹಲ್ಲೆ, ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಗಂಭೀರ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News