ಪ್ರಯಾಗ್‌ರಾಜ್ ಮಾಘ ಮೇಳ| ಪಲ್ಲಕ್ಕಿಯಲ್ಲಿ ತೆರಳದಂತೆ ತಡೆ: ಪವಿತ್ರ ಸ್ನಾನ ಮಾಡದೆ ಹಿಂತಿರುಗಿದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ
ಉತ್ತರ ಪ್ರದೇಶ ಸರಕಾರ ಸಂತರನ್ನು ಅವಮಾನಿಸಿದೆ: ಅಖಿಲೇಶ್ ಯಾದವ್ ಆಕ್ರೋಶ
Photo| hindustantimes
ಪ್ರಯಾಗ್ರಾಜ್: ಮಾಘ ಮೇಳದ ಸಂದರ್ಭದಲ್ಲಿ ಮೌನಿ ಅಮವಾಸ್ಯೆಯಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಪಲ್ಲಕ್ಕಿಯಲ್ಲಿ ತೆರಳುತ್ತಿದ್ದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರನ್ನು ಆಡಳಿತ ಮಂಡಳಿ ತಡೆದ ನಂತರ ವಿವಾದ ಭುಗಿಲೆದ್ದಿದೆ. ಅವರ ಬೆಂಬಲಿಗರು ಮತ್ತು ಪೊಲೀಸ್ ಅಧಿಕಾರಿಗಳ ನಡುವಿನ ಘರ್ಷಣೆಯ ನಂತರ ಶಂಕರಾಚಾರ್ಯರು ಸ್ನಾನ ಮಾಡದೆ ಹಿಂತಿರುಗಿ ತ್ರಿವೇಣಿ ಮಾರ್ಗದಲ್ಲಿರುವ ತಮ್ಮ ಶಿಬಿರದ ಹೊರಗೆ ಧರಣಿ ನಡೆಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತ ವೀಡಿಯೊ ಕೂಡ ವೈರಲ್ ಆಗಿದೆ. ಪೊಲೀಸರು ಮತ್ತು ಕೇಸರಿ ವಸ್ತ್ರಧಾರಿಗಳ ನಡುವೆ ಘರ್ಷಣೆ ನಡೆಯುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ. ಕೇಸರಿ ವಸ್ತ್ರಧಾರಿಗಳು ಜ್ಯೋತಿಷ್ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಶಿಷ್ಯರು ಎಂದು ತಿಳಿದು ಬಂದಿದೆ.
ಪ್ರಯಾಗ್‌ರಾಜ್‌ನಲ್ಲಿ ಗಂಗಾ ಮತ್ತು ಯಮುನಾ ಸಂಗಮದಲ್ಲಿ ನಡೆಯುವ ಮಾಘ ಅಥವಾ ಕುಂಭಮೇಳದ ಸಮಯದಲ್ಲಿ ಎಲ್ಲಾ ಅಖಾರಗಳು, ಸಂತರು ಮತ್ತು ಶಂಕರಾಚಾರ್ಯರು ಮುಖ್ಯ ಸ್ನಾನೋತ್ಸವದಂದು ಸ್ನಾನ ಮಾಡುತ್ತಾರೆ. ಇದಕ್ಕೆ ಕೆಲವು ಪ್ರೋಟೋಕಾಲ್‌ಗಳು ಜಾರಿಯಲ್ಲಿರುತ್ತವೆ. ಮಾರ್ಗಗಳನ್ನು ಗೊತ್ತುಪಡಿಸಲಾಗಿರುತ್ತದೆ. ಆದರೂ ಶಂಕರಾಚಾರ್ಯರಿಗೆ ಗಂಗಾ ಸ್ನಾನ ಮಾಡಲು ಅವಕಾಶ ಸಿಗದೆ ಹಿಂತಿರುಗಿದ್ದಾರೆ.
ಜನವರಿ 18ರ ಮೌನಿ ಅಮವಾಸ್ಯೆಯ ದಿನ. ಅವಿಮುಕ್ತೇಶ್ವರಾನಂದ ಸರಸ್ವತಿ ಪಲ್ಲಕ್ಕಿಯಲ್ಲಿ ಕುಳಿತು ತಮ್ಮ ಶಿಷ್ಯರೊಂದಿಗೆ ಸಂಗಮದಲ್ಲಿ ಸ್ನಾನ ಮಾಡಲು ಹೋಗುತ್ತಿದ್ದರು. ಜನಸಂದಣಿ ಹೆಚ್ಚಾಗಿತ್ತು. ಆದ್ದರಿಂದ ಪೊಲೀಸರು ಅವರನ್ನು ತಡೆದು ಕಾಲ್ನಡಿಗೆಯಲ್ಲಿ ಹೋಗುವಂತೆ ಕೇಳಿಕೊಂಡರು. ಆದರೆ ಅದಕ್ಕೆ ಶಿಷ್ಯರು ಒಪ್ಪದೇ ಮುಂದೆ ಸಾಗಿದರು. ಪೊಲೀಸರು ಶಂಕರಾಚಾರ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಈ ವೇಳೆ ವಾಗ್ವಾದ ಉಂಟಾಗಿ ಗಲಾಟೆ ಮತ್ತು ನೂಕು ನುಗ್ಗಲು ಉಂಟಾಗಿದೆ.
ಈ ವೇಳೆ ಅವಿಮುಕ್ತೇಶ್ವರಾನಂದ ಸರಸ್ವತಿ ಶಿಷ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವರದಿಗಳ ಪ್ರಕಾರ, ಪೊಲೀಸ್ ಠಾಣೆಯೊಳಗೆ ಶಿಷ್ಯರನ್ನು ಥಳಿಸಲಾಗಿದೆ. ಇದಲ್ಲದೆ ಪೊಲೀಸರು ಶಂಕರಾಚಾರ್ಯರ ಪಲ್ಲಕ್ಕಿಯನ್ನು ಎಳೆದುಕೊಂಡು ಹೋಗಿ ಸಂಗಮದಿಂದ 1 ಕಿ.ಮೀ ದೂರದಲ್ಲಿ ನಿಲ್ಲಿಸಿದರು. ಇದರಿಂದ ಕೋಪಗೊಂಡ ಶಂಕರಾಚಾರ್ಯರು ಸ್ನಾನ ಮಾಡದೆ ಹಿಂತಿರುಗಿದ್ದಾರೆ.
ಈ ಬಗ್ಗೆ ಶಂಕರಾಚಾರ್ಯರು ಆದಿತ್ಯನಾಥ್ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ಧಾರೆ. ಕಿರುಕುಳ ನೀಡಲು ಈ ಅಧಿಕಾರಿಗಳಿಗೆ ಮೇಲಿನಿಂದ ಆದೇಶ ಬಂದಿವೆ. ಕುಂಭಮೇಳ ಕಾಲ್ತುಳಿತದ ಬಗ್ಗೆ ಆದಿತ್ಯನಾಥ್ ಅವರನ್ನು ದೂಷಿಸಿದ್ದಕ್ಕಾಗಿ ಬಹುಶಃ ಅವರು ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಜನವರಿಯಲ್ಲಿ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದಾಗ, ಸರಕಾರ ಸಾವಿನ ಸಂಖ್ಯೆಯನ್ನು ಮರೆಮಾಚಿತ್ತು. ಆಗ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಆಕ್ಷೇಪಿಸಿದ್ದರು. ಆದಿತ್ಯನಾಥ್ ರಾಜೀನಾಮೆಗೂ ಅವರು ಒತ್ತಾಯಿಸಿದ್ದರು. ಅಂತಹ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಅವರು ಸಾರ್ವಜನಿಕರಿಗೆ ಸುಳ್ಳು ಹೇಳುವುದರಿಂದ ಅವರು ಹುದ್ದೆಗೆ ಅನರ್ಹರು. ನಿಧನರಾದವರಿಗಾಗಿ ನಾವು ಒಂದು ದಿನ ಉಪವಾಸ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಡಳಿತ, ಶಂಕರಾಚಾರ್ಯರು ಅನುಮತಿಯಿಲ್ಲದೆ ತಮ್ಮ ಪಲ್ಲಕ್ಕಿಯ ಮೇಲೆ ಸುಮಾರು 200 ಅನುಯಾಯಿಗಳೊಂದಿಗೆ ಇಲ್ಲಿಗೆ ಬಂದರು. ಸಂಗಮದಲ್ಲಿ ಭಾರಿ ಜನಸಮೂಹವಿತ್ತು. ಲಕ್ಷಾಂತರ ಜನರು ಅಲ್ಲಿದ್ದರು ಮತ್ತು ಅವರು ತಡೆಗೋಡೆಯನ್ನು ಭೇದಿಸಿ ಸುಮಾರು ಮೂರು ಗಂಟೆಗಳ ಕಾಲ ನಮ್ಮ ಹಿಂತಿರುಗುವ ಮಾರ್ಗವನ್ನು ತಡೆದರು. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನಾನುಕೂಲವಾಗಿದೆ ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಉತ್ತರ ಪ್ರದೇಶ ಸರಕಾರ ಸಂತರನ್ನು ಅವಮಾನಿಸಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತ ಸುದ್ದಿಯನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, ಸಂತರು ಮತ್ತು ಋಷಿಗಳ ಮೇಲಿನ ದೌರ್ಜನ್ಯ ಕ್ಷಮಿಸಲಾಗದು. ಇಂತಹ ಘಟನೆಗಳು ಬಿಜೆಪಿ ಸರಕಾರದ ಅವಧಿಯಲ್ಲಿ ಮಾತ್ರ ಏಕೆ ನಡೆಯುತ್ತಿವೆ? ಬಿಜೆಪಿಯ ದುರಾಡಳಿತ ಮತ್ತು ವಿಫಲ ವ್ಯವಸ್ಥೆಯೇ ಇದಕ್ಕೆ ಕಾರಣ ಎಂದು ಆರೋಪಿಸಲಾಗುತ್ತಿದೆ. ನಾಯಕ ಎಲ್ಲೆಡೆ ನಾಯಕನಾಗಲು ಪ್ರಯತ್ನಿಸಬಾರದು. ದುರಹಂಕಾರಿ ಬಿಜೆಪಿ ಸರಕಾರ ಮತ್ತು ಆಡಳಿತ ತನಗಿಂತ ಯಾರನ್ನೂ ಶ್ರೇಷ್ಠರೆಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.