×
Ad

ವಿಧಾನಸಭಾ ಚುನಾವಣೆ| ಪಶ್ಚಿಮ ಬಂಗಾಳದಲ್ಲಿ ಟಿಎಂಸಿ–ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಜೊತೆ ಮೈತ್ರಿಗೆ ಮುಂದಾದ ಸಿಪಿಐ(ಎಂ)

Update: 2026-01-19 12:17 IST

Photo| PTI

ಹೊಸದಿಲ್ಲಿ: 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಭಾರತೀಯ ಜನತಾ ಪಕ್ಷ (ಬಿಜೆಪಿ) ಎರಡನ್ನೂ ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಜೊತೆ ಚುನಾವಣಾ ಮೈತ್ರಿಗೆ ಮುಕ್ತವಾಗಿರುವುದಾಗಿ ಸಿಪಿಐ(ಎಂ) ತಿಳಿಸಿದೆ.

ರವಿವಾರ ತಿರುವನಂತಪುರದಲ್ಲಿ ಮುಕ್ತಾಯಗೊಂಡ ಮೂರು ದಿನಗಳ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಸಮಾಜವನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿರುವ ಟಿಎಂಸಿ ಹಾಗೂ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಸಿದ್ಧವಿರುವ ಎಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸುವುದು ಪಕ್ಷದ ತಂತ್ರವಾಗಿದೆ ಎಂದು ಸಿಪಿಐ(ಎಂ) ಹೇಳಿದೆ. ಕಾಂಗ್ರೆಸ್ ಅನ್ನು ಹೆಸರಿಸದೇ ನೀಡಿದ ಹೇಳಿಕೆಯಲ್ಲಿ ಬಿಜೆಪಿಯೇತರ ಹಾಗೂ ಟಿಎಂಸಿಯೇತರ ಮತಗಳನ್ನು ಏಕೀಕರಿಸುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಶುಭಂಕರ್ ಸರ್ಕಾರ್ ನೇತೃತ್ವದ ಒಂದು ಗುಂಪು ಎಡರಂಗದೊಂದಿಗೆ ಮೈತ್ರಿಗೆ ಹಿಂಜರಿದಿದ್ದರೂ, ಇಂತಹ ಒಪ್ಪಂದದಿಂದ ಪಕ್ಷಕ್ಕೆ ಲಾಭವಿಲ್ಲ ಎಂದು ಹೇಳಿದ್ದರೂ ಸಹ ಸಿಪಿಐ(ಎಂ) ಈ ನಿರ್ಧಾರ ಕೈಗೊಂಡಿದೆ. ಕಾಂಗ್ರೆಸ್ ಹಾಗೂ ಎಡರಂಗವು 2016 ಮತ್ತು 2021ರ ವಿಧಾನಸಭಾ ಚುನಾವಣೆಗಳು ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದವು.

2016ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಿದ್ದರೆ, ಸಿಪಿಐ(ಎಂ) 26 ಸ್ಥಾನಗಳನ್ನು ಗಳಿಸಿತ್ತು. 2021ರಲ್ಲಿ ಕಾಂಗ್ರೆಸ್ ಹಾಗೂ ಎಡರಂಗ ಎರಡೂ ಶೂನ್ಯ ಸ್ಥಾನಗಳಿಗೆ ಸೀಮಿತವಾಗಿದ್ದವು. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದರೆ, ಎಡಪಕ್ಷಗಳು ಯಾವುದೇ ಸ್ಥಾನ ಗಳಿಸಲಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿದ್ದವು.

ಇನ್ನೊಂದೆಡೆ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪರಸ್ಪರ ಎದುರಾಳಿಗಳಾಗಿರುವ ಕೇರಳದಲ್ಲಿ ಕಾಂಗ್ರೆಸ್ ವಿರುದ್ಧ ಸಿಪಿಐ(ಎಂ) ಟೀಕೆ ನಡೆಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕೇರಳಕ್ಕೆ ನ್ಯಾಯಸಮ್ಮತವಾಗಿ ದೊರಕಬೇಕಾದ ಬಾಕಿಗಳನ್ನು ನಿರಾಕರಿಸುತ್ತಿದ್ದು, ಹಣಕಾಸಿನ ನಿರ್ಬಂಧಗಳನ್ನು ವಿಧಿಸುತ್ತಿರುವುದನ್ನು ಬಹಿರಂಗಪಡಿಸಲಾಗುವುದು ಎಂದು ಪಕ್ಷ ಹೇಳಿದೆ. ಸಂಸತ್ತಿನ ಅತಿದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಫಲವಾಗಿದೆ ಎಂದು ಆರೋಪಿಸಿದೆ.

ಕೇರಳದಲ್ಲಿ ಕೋಮುವಾದಿ ಆರೆಸ್ಸೆಸ್‌–ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್‌ಗೆ ಸೈದ್ಧಾಂತಿಕ ಕೊರತೆಗಳಿವೆ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದ್ದು, ಈ ವಿಚಾರವನ್ನು ಜನರ ಮುಂದೆ ಇಡುವುದಾಗಿ ತಿಳಿಸಿದೆ.

ತಮಿಳುನಾಡಿನಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳನ್ನು ಸೋಲಿಸಲು ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳೊಂದಿಗೆ ಸ್ಪರ್ಧಿಸುವುದಾಗಿ ಸಿಪಿಐ(ಎಂ) ತಿಳಿಸಿದೆ. ಎಂ.ಕೆ. ಸ್ಟಾಲಿನ್ ನೇತೃತ್ವದ ಒಕ್ಕೂಟದಲ್ಲಿ ಭಾಗವಹಿಸುವ ಕುರಿತು ಕಾಂಗ್ರೆಸ್‌ನ ಒಂದು ಭಾಗದಲ್ಲಿ ಗೊಂದಲವಿರುವುದನ್ನೂ ಅದು ಉಲ್ಲೇಖಿಸಿದೆ.

ಅದೇ ರೀತಿ, ಅಸ್ಸಾಂನಲ್ಲಿ ಕೋಮುವಾದಿ ಮತ್ತು ವಿಭಜಕ ಬಿಜೆಪಿ ಸರಕಾರವನ್ನು ಸೋಲಿಸಲು ಎಲ್ಲಾ ಬಿಜೆಪಿ ವಿರೋಧಿ ಶಕ್ತಿಗಳನ್ನು ಒಟ್ಟುಗೂಡಿಸುವುದಾಗಿ ಸಿಪಿಐ(ಎಂ) ಹೇಳಿದೆ. ಈಶಾನ್ಯ ರಾಜ್ಯದಲ್ಲಿ ಎಡಪಕ್ಷಗಳು ಈಗಾಗಲೇ ಕಾಂಗ್ರೆಸ್ ಜೊತೆ ಸಹಕರಿಸುತ್ತಿವೆ. ಪುದುಚೇರಿಯಲ್ಲೂ ಬಿಜೆಪಿ ಮೈತ್ರಿ ಸರಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News