ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಪ್ರಕರಣ: ನಾಳೆ ಸಚಿವ ವಿಜಯ್ ಶಾ ಸಲ್ಲಿಸಿದ್ದ ಅರ್ಜಿ ವಿಚಾರಣೆ
ಸಚಿವ ವಿಜಯ್ ಶಾ|Photo: PTI
ಭೋಪಾಲ್,ಜ.18: ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಾಕಾರಿ ಪದ ಬಳಕೆ ಆರೋಪದ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಸಲ್ಲಿಸಿದ ಅರ್ಜಿಯ ಆಲಿಕೆಯನ್ನು ಸುಪ್ರೀಂಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಹಾಗೂ ಜಾಯ್‌ಮಾಲ್ಯಾ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವು ಸಚಿವ ವಿಜಯ್ ಶಾ ಅವರ ಅರ್ಜಿಯ ವಿಚಾರಣೆಯನ್ನು ನಡೆಸುವ ನಿರೀಕ್ಷೆಯಿದೆ.
ಕರ್ನಲ್ ಕುರೇಷಿ ವಿರುದ್ಧ ಆಡಿದ ಮಾತುಗಳಿಗಾಗಿ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ವಿಜಯ್ ಶಾ ಅವರನ್ನು ಸರ್ವೋಚ್ಚ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿತ್ತು. ಶಾ ಅವರು ನ್ಯಾಯಾಲಯದ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿತ್ತು. ಸಚಿವರ ನಡವಳಿಕೆಯ ಹಿಂದಿರುವ ಉದ್ದೇಶವು ಶಂಕಾಸ್ಪದವಾಗಿದೆಯೆಂದು ಹೇಳಿತ್ತು.
ವಿಜಯ್ ಶಾ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕೆ.ಪರಮೇಶ್ವರ್, ಈ ವಿಷಯವಾಗಿ ಸಚಿವರು ಬಹಿರಂಗವಾಗಿ ಕ್ಷಮೆಯಾಚಿಸಿ ಹೇಳಿಕೆ ನೀಡಿದ್ದು, ಅದನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗಿದ್ದು ಮತ್ತು ನ್ಯಾಯಾಲಯದ ದಾಖಲೆಗೂ ನೀಡಲಾಗಿದೆ ಎಂದು ಹೇಳಿದರು.
ಅದನ್ನು ಒಪ್ಪದ ನ್ಯಾಯಪೀಠವು ,‘‘ ಆನ್‌ಲೈನ್ ಮೂಲಕ ಕ್ಷಮಾಯಾಚನೆ ಅಂದರೆ ಏನು? ವಿಜಯ್ ಶಾ ಅವರ ಉದ್ದೇಶಗಳು ಹಾಗೂ ಪ್ರಾಮಾಣಿಕತೆಯ ಬಗ್ಗೆ ಸಂದೇಹವನ್ನು ಮೂಡಿಸುತ್ತದೆ. ನ್ಯಾಯಾಲಯದ ದಾಖಲೆಗೆ ಕ್ಷಮಾಯಾಚನೆ ಪತ್ರವನ್ನು ಒಪ್ಪಿಸಿ ಅದನ್ನು ಪರಿಶೀಲಿಸಬೇಕಿದೆ" ಎದು ನ್ಯಾಯಾಲಯವು ವಿಜಯ್ ಶಾ ಅವರಿಗೆ ತಿಳಿಸಿದೆ.
ಕ.ಸೋಫಿಯಾ ಖುರೇಷಿ ಹಾಗೂ ಮಹಿಳಾ ವಾಯುಪಡೆ ಅಧಿಕಾರಿ ವಿಂಗ್‌ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಆಪರೇಶನ್ ಸಿಂಧೂರ್ ಸಂದರ್ಭದಲ್ಲಿ ಮಾಧ್ಯಮಗಳಿಗೆ ಕಾರ್ಯಾಚರಣೆಯ ವಿವರಗಳನ್ನು ನೀಡಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ನಡೆಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆಗೆ ಭಯೋತ್ಪಾದಕರ ‘ಸಹೋದರಿ’ಯನ್ನೇ ಕಳುಹಿಸಿದ್ದಾರೆಂದು ಹೇಳಿದ್ದಕ್ಕಾಗಿ ವಿಜಯ್ ಶಾ ತೀವ್ರ ವಿವಾದಕ್ಕೆ ಒಳಗಾಗಿದ್ದರು.