×
Ad

ಮಾಲೆಗಾಂವ್ ಸ್ಫೋಟ ಪ್ರಕರಣ : ಎಟಿಎಸ್ ಆರೆಸ್ಸೆಸ್ ಮುಖ್ಯಸ್ಥನನ್ನು ಬಂಧಿಸಲು ಬಯಸಿತ್ತು ಎಂಬ ವಾದವನ್ನು ನಿರಾಕರಿಸಿದ ಎನ್ಐಎ ವಿಶೇಷ ನ್ಯಾಯಾಲಯ

Update: 2025-08-02 13:24 IST

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (Photo: PTI)

ಮುಂಬೈ: 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಂಧಿಸಲು ಬಯಸಿತ್ತು ಎಂಬ ವಾದವನ್ನು ಎನ್ಐಎ ವಿಶೇಷ ನ್ಯಾಯಾಲಯ ನಿರಾಕರಿಸಿದೆ.

ಮಾಲೆಗಾಂವ್ ಸ್ಫೋಟದ ಬಗ್ಗೆ ಆರಂಭದಲ್ಲಿ ತನಿಖೆ ನಡೆಸಿದ ಎಟಿಎಸ್ ಆರೋಪಪಟ್ಟಿ ಮತ್ತು ಪೂರಕ ಆರೋಪಪಟ್ಟಿ ಸಲ್ಲಿಸಿತ್ತು. 2010ರಲ್ಲಿ ಎನ್ಐಎ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು.

ಎನ್ಐಎ ತೀರ್ಪು ನೀಡಿದ ಬಳಿಕ ಪ್ರತಿಕ್ರಿಯಿಸಿದ್ದ ಎಟಿಎಸ್‌ಗೆ ಸೇರಿದ್ದ ಮಾಜಿ ಇನ್ಸ್‌ಪೆಕ್ಟರ್‌ ಮಹಿಬೂಬ್ ಮುಜಾವರ್, "ಮೇಲಧಿಕಾರಿಗಳು ಭಾಗವತ್ ಅವರನ್ನು ಬಂಧಿಸಬೇಕೆಂದು ಬಯಸಿದ್ದರು" ಎಂದು ಹೇಳಿದ್ದರು. ಪ್ರಕರಣದಲ್ಲಿ 10ನೇ ಆರೋಪಿ ಆಗಿರುವ ದ್ವಿವೇದಿ, ಮುಜಾವರ್ ಅವರ ಇದೇ ವಾದವನ್ನು ಕೋರ್ಟ್‌ನಲ್ಲಿ ಉಲ್ಲೇಖಿಸಿದ್ದರು.

2008ರ ಸೆಪ್ಟೆಂಬರ್ 29ರಂದು ನವರಾತ್ರಿಯ ಮುನ್ನಾದಿನ ಮತ್ತು ಪವಿತ್ರ ರಮಝಾನ್ ಮಾಸದ ಈದ್‌ಗೆ ಎರಡು ದಿನಗಳ ಮೊದಲು ಅಂಜುಮನ್ ಚೌಕ್ ಮತ್ತು ಭಿಕ್ಕು ಚೌಕ್ ನಡುವೆ ಸಂಭವಿಸಿದ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು ಮತ್ತು 101 ಜನರು ಗಾಯಗೊಂಡಿದ್ದರು.

ಏಳು ಆರೋಪಿಗಳನ್ನು ಖುಲಾಸೆಗೊಳಿಸಿದ 1,036 ಪುಟಗಳ ತೀರ್ಪಿನಲ್ಲಿ ವಿಶೇಷ ನ್ಯಾಯಾಧೀಶ ಅಭಯ್ ಲಹೋಟಿ ಅವರು ಮಹತ್ವದ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಸಾಕ್ಷ್ಯಾಧಾರದ ಕೊರತೆಯಿಂದಾಗಿ ನ್ಯಾಯಾಲಯ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಕರ್ನಲ್ ಪ್ರಸಾದ್ ಪುರೋಹಿತ್, ಸುಧಾಕರ್ ಧರ್ ದ್ವಿವೇದಿ, ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ, ರಾಜಾ ರಹಿರ್ಕರ್ ಮತ್ತು ಸುಧಾಕರ್ ಓಂಕಾರನಾಥ್ ಚತುರ್ವೇದಿ ಅವರನ್ನು ಖುಲಾಸೆಗೊಳಿಸಿತ್ತು.

ʼಎಟಿಎಸ್ ಅಧಿಕಾರಿ ಮೆಹಬೂಬ್ ಮುಜಾವರ್ ಅವರು ಈ ಪ್ರಕರಣದ ತನಿಖಾ ಅಧಿಕಾರಿಗಳಲ್ಲಿ ಒಬ್ಬರು ಎಂದು 10ನೇ ಆರೋಪಿ ಪರ ವಕೀಲರು ವಾದಿಸಿದ್ದರು. ಹಿರಿಯ ಎಟಿಎಸ್ ಅಧಿಕಾರಿಗಳು ಮೋಹನ್ ಭಾಗವತ್ ಅವರನ್ನು ಬಂಧಿಸುವಂತೆ ಅವರಿಗೆ ನಿರ್ದೇಶನ ನೀಡಿದ್ದರು. ಆದರೆ ಮೆಹಬೂಬ್ ಮುಜಾವರ್ ಆಪಾದಿತ ಅಪರಾಧದಲ್ಲಿ ಮೋಹನ್ ಭಾಗವತ್ ಅವರ ಯಾವುದೇ ಪಾತ್ರ ಕಂಡುಬಂದಿಲ್ಲವಾದ್ದರಿಂದ ಅಂತಹ ಕಾನೂನುಬಾಹಿರ ಆದೇಶವನ್ನು ಪಾಲಿಸಲು ನಿರಾಕರಿಸಿದ್ದರು. ಆದ್ದರಿಂದ ಮೆಹಬೂಬ್ ಮುಜಾವರ್ ಅವರನ್ನು ಎಟಿಎಸ್ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದೆ. ಅದನ್ನು ಸೋಲಾಪುರದ ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಲಾಗಿದೆʼ ಎಂದು ನ್ಯಾಯಾಲಯ ಹೇಳಿದೆ.

ʼಪ್ರಾಸಿಕ್ಯೂಷನ್‌ ಸಾಕ್ಷಿಯಾಗಿದ್ದ ಸಹಾಯಕ ಪೊಲೀಸ್ ಆಯುಕ್ತ ಮೋಹನ್ ಕುಲಕರ್ಣಿ, ಆರೆಸ್ಸೆಸ್ ನಾಯಕನನ್ನು ಬಂಧಿಸಲು ಸೂಚಿಸಿರುವ ಬಗೆಗಿನ ಮೆಹಬೂಬ್ ಮುಜಾವರ್ ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಆದರೆ ತಲೆಮರೆಸಿಕೊಂಡಿರುವ ಆರೋಪಿ ರಾಮ್‌ಜಿ ಕಲ್ಸಂಗ್ರ ಮತ್ತು ಸಂದೀಪ್ ಡಾಂಗೆ ಅವರನ್ನು ಪತ್ತೆಹಚ್ಚಲು ಸೂಚಿಸಲಾಗಿತ್ತು ಎಂದು ಒಪ್ಪಿಕೊಂಡಿದ್ದರು. ಎಟಿಎಸ್ ಇಬ್ಬರು ಆರೋಪಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. ಅದಕ್ಕೆ ಸಂಬಂಧಿಸಿದ ಸಾಕ್ಷಿಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಲ್ಲ ಎಂಬುದಾಗಿ ಮುಜಾವರ್‌ ಬಹಿರಂಗವಾಗಿ ಮಾಡಿರುವ ಆರೋಪವನ್ನೂ ಕುಲಕರ್ಣಿ ನಿರಾಕರಿಸಿದ್ದಾರೆ' ಎಂದು ನ್ಯಾಯಾಧೀಶ ಲಹೋತಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News