×
Ad

ಪ್ರತಿ 10 ಲಕ್ಷ ಜನರಿಗೆ ಕೇವಲ 22 ನ್ಯಾಯಾಧೀಶರು!

ಪರದಾಡುತ್ತಿರುವ ಭಾರತೀಯ ನ್ಯಾಯಾಂಗ ವ್ಯವಸ್ಥೆ

Update: 2026-01-31 20:26 IST

ಸಾಂದರ್ಭಿಕ ಚಿತ್ರ | Photo Credit : freepik

ಹೊಸದಿಲ್ಲಿ: ಭಾರತದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ ಕೇವಲ 22 ನ್ಯಾಯಾಧೀಶರಿದ್ದು, ದೇಶದ ನ್ಯಾಯಾಂಗ ವ್ಯವಸ್ಥೆಯು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಕಾನೂನು ಸಚಿವಾಲಯದ ಪ್ರಕಾರ ಇದು ಸಕಾಲಿಕ ನ್ಯಾಯವನ್ನೊದಗಿಸಲು ಅಗತ್ಯವಿರುವುದಕ್ಕಿಂತ ತುಂಬಾ ಕಡಿಮೆಯಾಗಿದೆ.

ಈ ಅನುಪಾತವು ಜನಗಣತಿ 2011ರ ಜನಸಂಖ್ಯೆ 121.085 ಕೋಟಿ ಮತ್ತು 2026ರಲ್ಲಿ ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳು, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಅನುಮತಿಸಲಾದ ನ್ಯಾಯಾಧೀಶರ ಸಂಖ್ಯೆಯನ್ನು ಆಧರಿಸಿದೆ. ನ್ಯಾಯಾಧೀಶರ ಈ ಕೊರತೆಯು ನ್ಯಾಯಾಂಗದಲ್ಲಿಯ ರಚನಾತ್ಮಕ ಸಮಸ್ಯೆಗಳನ್ನು ಬಿಂಬಿಸುತ್ತದೆ.

ಅಧಿಕೃತ ದತ್ತಾಂಶಗಳ ಪ್ರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಒಟ್ಟು 34 ನ್ಯಾಯಾಧೀಶರ ಹುದ್ದೆಗಳಿದ್ದು, ಪ್ರಸ್ತುತ 33 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಚ್ಚ ನ್ಯಾಯಾಲಯಗಳಲ್ಲಿ ಅನುಮೋದಿತ 1,122 ಹುದ್ದೆಗಳಿದ್ದರೆ ಕೇವಲ 814 ನ್ಯಾಯಾಧೀಶರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಖಾಲಿ ಹುದ್ದೆಗಳ ಗಮನಾರ್ಹ ಸಮಸ್ಯೆಯನ್ನು ತೋರಿಸುತ್ತಿದೆ. ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 20,833 ನ್ಯಾಯಾಧೀಶರಿದ್ದು, ದೇಶದಲ್ಲಿಯ ಬಹುಪಾಲು ಮೊಕದ್ದಮೆಗಳನ್ನು ನಿಭಾಯಿಸುತ್ತಿದ್ದಾರೆ.

ಭಾರತೀಯ ಕಾನೂನು ಆಯೋಗವು ತನ್ನ 120ನೇ ವರದಿಯಲ್ಲಿ ಪ್ರಕರಣಗಳ ಹೊರೆಯನ್ನು ತಗ್ಗಿಸಲು ಮತ್ತು ತ್ವರಿತ ನ್ಯಾಯವನ್ನು ಖಚಿತಪಡಿಸಲು ಪ್ರತಿ 10 ಲಕ್ಷ ಜನರಿಗೆ 50 ನ್ಯಾಯಾಧೀಶರ ಅನುಪಾತವನ್ನು ಶಿಫಾರಸು ಮಾಡಿದೆ. ಆದರೆ ಭಾರತದಲ್ಲಿ ಪ್ರಸ್ತುತ ಅನುಪಾತವು ಈಗಲೂ ಈ ಗುರಿಯ ಅರ್ಧಕ್ಕಿಂತಲೂ ಕಡಿಮೆಯಿದೆ.

ಜೈಲು ಅಂಕಿಅಂಶಗಳಲ್ಲಿಯೂ ನ್ಯಾಯಾಲಯಗಳ ಮೇಲಿನ ಒತ್ತಡ ಕಂಡು ಬರುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕದ (ಎನ್‌ಸಿಆರ್‌ಬಿ) ಪ್ರಕಾರ, 2023ರಲ್ಲಿ 3,89,910 ವಿಚಾರಣಾಧೀನ ಕೈದಿಗಳಿದ್ದರು. ಸರಕಾರದ ಪ್ರಕಾರ, ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಪ್ರಕ್ರಿಯೆ ಸಂಪೂರ್ಣವಾಗಿ ನ್ಯಾಯಾಂಗದ ಹೊಣೆಗಾರಿಕೆಯಾಗಿದೆ. ಪ್ರಕರಣದ ಸಂಕೀರ್ಣತೆ, ಸಾಕ್ಷ್ಯಗಳ ವಿಧಗಳು, ವಕೀಲರು, ತನಿಖಾ ಸಂಸ್ಥೆಗಳು, ಸಾಕ್ಷಿಗಳು ಮತ್ತು ದಾವೆ ಹೂಡುವವರ ಸಹಕಾರ ಹಾಗೂ ನ್ಯಾಯಾಲಯ ಸೌಲಭ್ಯಗಳು ಮತ್ತು ಸಿಬ್ಬಂದಿ ಲಭ್ಯತೆಗೆ ಸಂಬಂಧಿಸಿದ ವಿವಿಧ ಅಂಶಗಳಿಂದಾಗಿ ವಿಚಾರಣೆಗಳು ಬಾಕಿಯುಳಿಯುತ್ತವೆ.

ಸಂವಿಧಾನದ 21ನೇ ವಿಧಿಯಲ್ಲಿ ಹೇಳಿರುವಂತೆ ತ್ವರಿತ ನ್ಯಾಯಕ್ಕೆ ತನ್ನ ಬದ್ಧತೆಯನ್ನು ದೃಢಪಡಿಸಿರುವ ಕೇಂದ್ರ ಸರಕಾರವು ಬಾಕಿಯಿರುವ ಪ್ರಕರಣಗಳ ಹೊರೆಯನ್ನು ಕಡಿಮೆ ಮಾಡಲು ಹಲವಾರು ಉಪಕ್ರಮಗಳನ್ನು ಆರಂಭಿಸಿರುವುದಾಗಿ ಹೇಳಿದೆ.

ನ್ಯಾಯಾಂಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಪ್ರಾಯೋಜಿತ ಯೋಜನೆಯಡಿ ನ್ಯಾಯಾಲಯಗಳಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸು ಬೆಂಬಲದೊಂದಿಗೆ ಲಭ್ಯತೆ,ದಕ್ಷತೆ ಮತ್ತು ಪಾರದರ್ಶಕತೆಯನ್ನು ಸುಧಾರಿಸಲು ಇ-ಕೋರ್ಟ್ಸ್ ಮಿಷನ್ ಮೋಡ್ ಯೋಜನೆಯ ಮೂಲಕ ತಂತ್ರಜ್ಞಾನ ಬಳಕೆ ಈ ಉಪಕ್ರಮಗಳಲ್ಲಿ ಸೇರಿವೆ.

ಕಾನೂನು ಮತ್ತು ಸಚಿವ ಅರ್ಜುನ ಮೇಘ್ವಾಲ್ ಅವರು ಸಂಸತ್ತಿನಲ್ಲಿ ಇತ್ತೀಚಿಗೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿವರಗಳನ್ನು ಒದಗಿಸಿದ್ದಾರೆ.

ಪ್ರತ್ಯೇಕ ಉತ್ತರದಲ್ಲಿ ಸಚಿವರು 2018 ಮತ್ತು ಜ.23,2026ರ ನಡುವೆ ಮಾಡಲಾಗಿರುವ ನ್ಯಾಯಾಂಗ ನೇಮಕಾತಿಗಳ ಮಾಹಿತಿಯನ್ನು ನೀಡಿದ್ದಾರೆ. ಈ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ 33,ಪರಿಶಿಷ್ಟ ಪಂಗಡಗಳ 17,ಇತರ ಹಿಂದುಳಿದ ವರ್ಗಗಳ 104 ಮತ್ತು ಅಲ್ಪಸಂಖ್ಯಾತ ಸಮುದಾಯಗಳ 46 ನ್ಯಾಯಾಧೀಶರು ಸೇರಿದಂತೆ 847 ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. ಹೆಚ್ಚುವರಿಯಾಗಿ ವಿವಿಧ ಉಚ್ಚ ನ್ಯಾಯಾಲಯಗಳಿಗೆ 130 ಮಹಿಳಾ ನ್ಯಾಯಾಧೀಶರನ್ನು ನೇಮಕಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News