×
Ad

ಪಶ್ಚಿಮ ಬಂಗಾಳ SIR: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಝೂಲನ್ ಗೋಸ್ವಾಮಿಗೆ ಸಮನ್ಸ್

Update: 2026-01-31 20:23 IST

ಝೂಲನ್ ಗೋಸ್ವಾಮಿ | Photo Credit : ICC 

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಡಿ (ಎಸ್‌ಐಆರ್) ತಂದೆಯ ಹೆಸರಿನಲ್ಲಿ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಝೂಲನ್ ಗೋಸ್ವಾಮಿ ಮತ್ತು ಅವರ ಇಬ್ಬರು ಒಡಹುಟ್ಟಿದವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ತಂದೆಯ ಹೆಸರು ಕೆಲವು ದಾಖಲೆಗಳಲ್ಲಿ ‘ನಿಷಿತ್ ರಂಜನ್ ಗೋಸ್ವಾಮಿ’ ಮತ್ತು ಇತರ ದಾಖಲೆಗಳಲ್ಲಿ ‘ನಿಷಿತ್ ಗೋಸ್ವಾಮಿ’ ಎಂದಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಜ.27ಕ್ಕೆ ವಿಚಾರಣೆಯನ್ನು ನಿಗದಿಗೊಳಿಸಲಾಗಿತ್ತು. ಗೋಸ್ವಾಮಿ ಖುದ್ದಾಗಿ ಹಾಜರಾಗುವ ಅಗತ್ಯವಿರಲಿಲ್ಲ ಮತ್ತು ಅವರು ತನ್ನ ನಿವಾಸದಿಂದಲೇ ವಿಷಯವನ್ನು ಬಗೆಹರಿಸಿಕೊಂಡಿದ್ದಾರೆ. ಅವರ ಇಬ್ಬರು ಒಡಹುಟ್ಟಿದವರು ಸ್ಥಳೀಯ ಶಾಲೆಯೊಂದರಲ್ಲಿ ವಿಚಾರಣೆಗೆ ಹಾಜರಾಗಿದ್ದರು.

ವೇಗದ ಬೌಲರ್ ಆಗಿದ್ದ ಗೋಸ್ವಾಮಿ 12 ಟೆಸ್ಟ್,204 ಏಕದಿನ ಅಂತರರಾಷ್ಟ್ರೀಯ ಮತ್ತು 68 T20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಹಲವಾರು ಅಂತರರಾಷ್ಟ್ರಿಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮಾಜಿ ಫುಟ್ಬಾಲ್ ಪಟು ಮೆಹತಾಬ್ ಹುಸೇನ್ ಅವರಿಗೂ ಎಸ್‌ಐಆರ್ ಅಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.

ಹುಸೇನ್ ರವಿವಾರ ದಕ್ಷಿಣ 24 ಪರಗಣಗಳ ಜಿಲ್ಲೆಯ ಮಲ್ಲಿಕ್‌ಪುರದ ಶಾಲೆಯೊಂದರಲ್ಲಿ ವಿಚಾರಣೆಗೆ ಹಾಜರಾಗಬೇಕಿದೆ. ಕೋಲ್ಕತಾದ ನ್ಯೂಟೌನ್ ನಿವಾಸಿಯಾಗಿರುವ ಅವರ ಹೆಸರು ಹುಟ್ಟೂರು ಮಲ್ಲಿಕ್‌ಪುರದ ಮತದಾರರ ಪಟ್ಟಿಯಲ್ಲಿದೆ.

ಚುನಾವಣಾ ದಾಖಲೆಗಳಲ್ಲಿ ತನ್ನ ಮತ್ತು ತನ್ನ ತಾಯಿಯ ಹೆಸರುಗಳು ತಾಳೆಯಾಗಿಲ್ಲ, ಹೀಗಾಗಿ ಸಮನ್ಸ್ ನೀಡಲಾಗಿದೆ ಎಂದು ಹುಸೇನ್ ಸುದ್ದಿಸಂಸ್ಥೆಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News