ನಾಳೆ (ಫೆ.1) ಕೇಂದ್ರ ಬಜೆಟ್ | ದಾಖಲೆಯ 9ನೇ ಬಾರಿಗೆ ಬಜೆಟ್ ಭಾಷಣ ಮಾಡಲಿರುವ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ | Photo Credit : PTI
ಹೊಸದಿಲ್ಲಿ: 2026-2027ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವಿವಾರ ಬೆಳಗ್ಗೆ 11:00 ಗಂಟೆಗೆ ಮಂಡಿಸಲಿದ್ದಾರೆ. ನಿರ್ಮಲಾ ಅವರು ಸತತ 9ನೇ ಬಾರಿಗೆ ಮಂಡಿಸಲಿರುವ ಬಜೆಟ್ ಇದಾಗಿದೆ. ನರೇಂದ್ರ ಮೋದಿ ಸರಕಾರದ ಮೂರನೇ ಅಧಿಕಾರಾವಧಿಯಲ್ಲಿ ಮಂಡನೆಯಾಗಲಿರುವ ಮೂರನೆ ಬಜೆಟ್ ಕೂಡಾ ಹೌದು.
ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಬಜೆಟ್ ಭಾಷಣ ಮಾಡಿದ ಬಳಿಕ ಅದರ ಪ್ರತಿಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುವುದು.
ಲೋಕಸಭೆಯಲ್ಲಿ ಬಜೆಟ್ ಭಾಷಣ ಪೂರ್ಣಗೊಂಡ ಬಳಿಕ ಅದರ ದಾಖಲೆಗಳು ಅಧಿಕೃತ ಮೊಬೈಲ್ ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಬಜೆಟ್ ಮಂಡನೆಯ ಆನಂತರ ನಿರ್ಮಲಾ ಸೀತಾರಾಮನ್ ಅವರು ದೇಶಾದ್ಯಂತದ ವಿವಿಧ ಪ್ರಾಂತಗಳ ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ.
ಬಜೆಟ್ ಸಿದ್ಧಪಡಿಸುವ ಮುನ್ನ ನಿರ್ಮಲಾ ಅವರು ಆರ್ಥಿಕ ತಜ್ಞರು, ಕಾರ್ಮಿಕ ಸಂಘಟನೆಗಳು, ಆರೋಗ್ಯಪಾಲನಾ ವಲಯ,ಕಿರು ಹಾಗೂ ಸೂಕ್ಷ್ಮ ಮಧ್ಯಮಗಾತ್ರದ ಉದ್ಯಮಗಳು, ವ್ಯಾಪಾರ ಹಾಗೂ ಸೇವೆಗಳು, ಕೈಗಾರಿಕೆ, ಹಣಕಾಸು ವಲಯ ಮತ್ತು ಬಂಡವಾಳ ಮಾರುಕಟ್ಟೆಗಳ ಪ್ರತಿನಿಧಿಗಳು ಸೇರಿದಂತೆ ಸಂಬಂಧಪಟ್ಟವರ ಜೊತೆ ಸಮಾಲೋಚನೆ ಹಾಗೂ ಸಭೆಗಳನ್ನು ನಡೆಸಿದ್ದರು.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕೂಡಾ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ವಿಸ್ತೃತವಾಗಿ ಬಜೆಟ್ ಪೂರ್ವಭಾವಿ ಸಮಾಲೋಚನೆಗಳನ್ನು ನಡೆಸಿದ್ದರು ಹಾಗೂ ಸಲಹೆಗಳನ್ನು ಒಳಗೊಂಡ ವರದಿಗಳನ್ನು ಅವರು ವಿತ್ತ ಸಚಿವೆಗೆ ಸಲ್ಲಿಸಿದ್ದರು. ಬಜೆಟ್ ಸಿದ್ಧತೆಯ ಸಂದರ್ಭ ಯುವಜನರು ಸೇರಿದಂತೆ ವಿವಿಧ ವೇದಿಕೆಗಳ ಮೂಲಕ ನಾಗಕರಿಕರ ಅಭಿಪಾಯಗಳನ್ನು ಸಂಗ್ರಹಿಸಲಾಗಿತ್ತು.
ಭಾರತವು ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳ ಸಾಲಿಗೆ ಸೇರಿದ ಸಮಯದಲ್ಲಿ ಈ ಬಜೆಟ್ ಮಂಡನೆಯಾಗುತ್ತಿದೆ.
ಕೇಂದ್ರದ ಮುಂದಿರುವ ಸವಾಲುಗಳು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಉತ್ಪನ್ನಗಳಿಗೆ ಶೇ.50ರಷ್ಟು ಹೆಚ್ಚುವರಿ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಭಾರತವು ಜಾಗತಿಕವಾಗಿ ಹಲವಾರು ಸವಾಲುಗಳನ್ನೆದುರಿಸುತ್ತಿದೆ. ಅಲ್ಲದೆ ಕೇಂದ್ರ ಸರಕಾರವು ವಿತ್ತೀಯ ಕೊರತೆಯನ್ನೂ ನಿರ್ವಹಿಸಬೇಕಾಗಿದೆ. ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ ಶೇ . 4.5ರಷ್ಟು ಇಳಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ.
ಈ ಹಿಂದಿನ ವರ್ಷಗಳಲ್ಲಿ ಕೇಂದ್ರ ಸರಕಾರವು ಮೂಲಸೌಕರ್ಯಗಳು ಅಥವಾ ಬಂಡವಾಳ ವೆಚ್ಚದ ಮೇಲಿನ ಖರ್ಚನ್ನು ಹೆಚ್ಚಿಸಿದೆ. 2025ರ ಸಾಲಿನ ಬಜೆಟ್‌ನಲ್ಲಿ ಈ ವಲಯವು ಹೆಚ್ಚು ಬೆಳವಣಿಗೆಯನ್ನು ಕಂಡಿತ್ತು. ಹಾಗೆಯೇ ಉತ್ಪಾದನಾ ವಲಯಕ್ಕೂ ಕೇಂದ್ರ ಸರಕಾರ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಯಿದೆ.
ಬಜೆಟ್‌ನಲ್ಲಿ ಕೇರಳ, ಪಶ್ಚಿಮಬಂಗಾಳ, ತಮಿಳುನಾಡು ಸೇರಿದಂತೆ ವಿಧಾನಸಭಾ ಚುನಾವಣೆಯನ್ನು ಎದುರಿಲಿರುವ ರಾಜ್ಯಗಳಿಗೆ ಬಂಪರ್‌ಕೊಡುಗೆಗಳನ್ನು ಘೋಷಿಸುವ ನಿರೀಕ್ಷೆಯಿದೆ.
ಬಜೆಟ್ ಮಂಡನೆ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಆರ್ಥಿಕ ಬೆಳವಣಿಗೆಯು ಎಲ್ಲರಿಗೂ ಸಮಾನವಾಗಿ ದೊರೆಯುತ್ತಿಲ್ಲವೆಂದು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಾಯಕರು ಆರೋಪಿಸಿದ್ದಾರೆ.
ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ‘ಎಂನರೇಗಾ’ದ ಹೆಸರನ್ನು ವಿಬಿ ಜಿ ರಾಮ್ ಜಿ ಎಂದು ಮರುನಾಮಕರಣಗೊಳಿಸಿರುವ ಕೇಂದ್ರ ಸರಕಾರವು, ಬಜೆಟ್‌ನಲ್ಲಿ ಈ ಯೋಜನೆಗೆ ಸಂಬಂಧಿಸಿ ವಿಶೇಷ ಕೊಡುಗೆಗನ್ನು ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.