DELHI | ಅಂತ್ಯಕ್ರಿಯೆಗೆ ಹಸುವಿನ ಬೆರಣಿ ಬಳಸುವ MCD ನಿರ್ಧಾರವು ಮಾಲಿನ್ಯ ಹೆಚ್ಚಿಸಬಹುದು: ತಜ್ಞರು
Photo Credit : jagran.com
ಹೊಸದಿಲ್ಲಿ, ನ. 29: ದಿಲ್ಲಿ ಮಹಾನಗರ ಪಾಲಿಕೆ (MCD) ಚಿತಾಗಾರಗಳಲ್ಲಿ ಹಸುವಿನ ಬೆರಣಿಯನ್ನು ಬಳಸಲು ಆರಂಭಿಸಲು ನಿರ್ಧರಿಸಿದೆ. ಆದರೆ, ಹಸುವಿನ ಬೆರಣಿಗಳನ್ನು ಸುಡುವುದರಿಂದ ಮಾಲಿನ್ಯದ ಮಟ್ಟ ಮತ್ತಷ್ಟು ಹೆಚ್ಚಾಗುತ್ತದೆ ಎಂಬುದನ್ನು ವೈಜ್ಞಾನಿಕ ಅಧ್ಯಯನಗಳು ದೃಢಪಡಿಸಿವೆ ಎಂದು ತಜ್ಞರು ಗಮನ ಸೆಳೆದಿದ್ದಾರೆ.
ಹಸುವಿನ ಬೆರಣಿಗಳನ್ನು ಸುಟ್ಟಾಗ ಮರಕ್ಕಿಂತ ಹೆಚ್ಚಿನ ಪ್ರಮಾಣದ ಕಣಗಳು (ಪಿಎಂ 2.5 ಹಾಗೂ ಪಿಎಂ 10), ಸಾವಯವ ಸಂಯುಕ್ತ ಗಳು ಹಾಗೂ ಕಪ್ಪು ಇಂಗಾಲ ಬಿಡುಗಡೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ದಿಲ್ಲಿ ಮಹಾನಗರ ಪಾಲಿಕೆ (MCD)ಯ ಸಾರ್ವಜನಿಕ ಆರೋಗ್ಯ ಇಲಾಖೆ ಗುರುವಾರ ಸಭೆ ನಡೆಸಿತು. ಈ ಸಭೆಯಲ್ಲಿ ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ಮಹಾನಗರ ಪಾಲಿಕೆಯ ಚಿತಾಗಾರದಲ್ಲಿ ಹಸುವಿನ ಬೆರಣಿಯನ್ನು ಬಳಸುವ ಬಗ್ಗೆ ಚರ್ಚಿಸಲಾಗಿತ್ತು.
ಚಿತಾಗಾರಗಳಲ್ಲಿ ಮೃತದೇಹಗಳನ್ನು ಸುಡಲು ಕಟ್ಟಿಗೆಯನ್ನು ಬಳಸುವುದರಿಂದ ನಗರದ ವಾಯು ಮಾಲಿನ್ಯ ಹೆಚ್ಚಾಗುತ್ತದೆ. ಆದುದರಿಂದ ಮೃತದೇಹಗಳನ್ನು ಸುಡಲು ಕಟ್ಟಿಗೆ ಬಳಸುವುದನ್ನು ನಿಲ್ಲಿಸಲು ದಿಲ್ಲಿ ಮಹಾನಗರ ಪಾಲಿಕೆ ನಿರ್ಧರಿಸಿದೆ ಎಂದು ಸಭೆಗೆ ಹಾಜರಾಗಿದ್ದ ಸದಸ್ಯರೊಬ್ಬರು ತಿಳಿಸಿದ್ದಾರೆ.
‘‘ವಿದ್ಯುತ್ ಚಿತಾಗಾರಗಳು ಕಡಿಮೆ ವಾಯು ಮಾಲಿನ್ಯ ಉಂಟು ಮಾಡುತ್ತವೆ. ಆದುದರಿಂದ ನಾವು ಸಾಂಪ್ರದಾಯಿಕ ವಿಧಾನಗಳಿಂದ ದೂರ ಸರಿಯಬೇಕು. ಇದು ನಮಗೆ ಉತ್ತಮ ಆಯ್ಕೆಗೆ ಸಹಾಯ ಮಾಡುತ್ತದೆ ಎಂದು ಪರಿಸರವಾದಿ ವಿಮಲೇಂದು ಝಾ ಹೇಳಿದ್ದಾರೆ.