×
Ad

ಈಗ ಬೆಳೆಸಲಾಗುತ್ತಿರುವ ಮಾನಸಿಕತೆಯಿಂದ ಧರ್ಮಕ್ಕೆ, ದೇಶಕ್ಕೆ ಒಳಿತಾಗದು: ಭಾಗವತ್ ಗೆ ಹೇಳಿದ ಸ್ವಾಮಿ ಪ್ರೇಮಾನಂದ್

Update: 2023-11-30 12:29 IST

Screengrab:X

ಬೃಂದಾವನ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂತ ಪ್ರೇಮಾನಂದ್ ಮಹಾರಾಜ್ ಅವರನ್ನು ಬುಧವಾರ ಬೆಳಗ್ಗೆ ಬೃಂದಾವನದಲ್ಲಿ ಭೇಟಿಯಾಗಿದ್ದು, ಅವರಿಬ್ಬರ ನಡುವೆ ನಡೆದ 15 ನಿಮಿಷಗಳ ಆಧ್ಯಾತ್ಮಿಕ ಚರ್ಚೆಯ ಸಂದರ್ಭದಲ್ಲಿ ಸಂತ ಪ್ರೇಮಾನಂದ್ ಮಹಾರಾಜ್ ಅವರು ಸಾಮಾಜಿಕ ಸವಾಲಿನ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಮಾತುಕತೆಯಲ್ಲಿ ಆಧ್ಯಾತ್ಮಿಕ ಹಾಗೂ ಪ್ರಾಯೋಗಿಕ ಸೇವೆಗಳ ಅಗತ್ಯತೆಯನ್ನು ಪ್ರತಿಪಾದಿಸಿದ ಪ್ರೇಮಾನಂದ್ ಮಹಾರಾಜ್, ಸಮಾಜದಲ್ಲಿ ಕುಂಠಿತಗೊಳ್ಳುತ್ತಿರುವ ಬೌದ್ಧಿಕ ಮಟ್ಟದ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ್ದಾರೆ.

ಬುಧವಾರ ಬೆಳಗ್ಗೆ ಸುಮಾರು 8 ಗಂಟೆಗೆ ಪರಿಕ್ರಮ ಮಾರ್ಗದಲ್ಲಿರುವ ಪ್ರೇಮಾನಂದ್ ಮಹಾರಾಜ್ ಅವರ ಆಶ್ರಮವನ್ನು ತಲುಪಿದ ಮೋಹನ್ ಭಾಗವತ್, ಸಂತರಿಗೆ ನಿಲುವಂಗಿ ಹಾಗೂ ಹಣ್ಣುಗಳ ಬುಟ್ಟಿಯನ್ನು ಕಾಣಿಕೆ ನೀಡಿದರು.

ಅವರಿಬ್ಬರ ನಡುವಿನ ಮಾತುಕತೆಯ ಸಂದರ್ಭದಲ್ಲಿ, ಪ್ರಾಯೋಗಿಕ ಹಾಗೂ ಆಧ್ಯಾತ್ಮಿಕಗಳೆರಡರ ಸೇವೆಗೂ ದೇವರ ಕೊಡುಗೆಯಾದ ಜೀವನದ ಮಹತ್ವದ ಕುರಿತು ಪ್ರೇಮಾನಂದ್ ಮಹಾರಾಜ್ ಬೆಳಕು ಚೆಲ್ಲಿದ್ದಾರೆ. ಹೊಸ ಪೀಳಿಗೆಯಲ್ಲಿ ವ್ಯಭಿಚಾರ, ವ್ಯಸನ ಮತ್ತು ಹಿಂಸಾಚಾರದ ಪ್ರವೃತ್ತಿಯನ್ನು ನೋಡುವುದು ಹೃದಯವನ್ನು ಭಾರಗೊಳಿಸುತ್ತಿದೆ. ಈಗ ಸೃಷ್ಟಿಯಾಗುತ್ತಿರುವ ಮನಸ್ಥಿತಿ ಧರ್ಮ ಮತ್ತು ದೇಶಕ್ಕೆ ಪ್ರಯೋಜನಕಾರಿಯಲ್ಲ ಎಂದು ಅವರು ಹೇಳಿದರು. ಈಗ ಬೆಳೆಸಲಾಗುತ್ತಿರುವ ಮಾನಸಿಕತೆಯಿಂದ ಧರ್ಮಕ್ಕೆ, ದೇಶಕ್ಕೆ ಒಳಿತಾಗದು ಎಂದು ಸ್ವಾಮಿ ಪ್ರೇಮಾನಂದ್ ಅವರು ಭಾಗವತ್ ಗೆ ಹೇಳಿದರು.

ಸಾಮಾಜಿಕ ಮೌಲ್ಯಗಳು ಕುಸಿತವಾಗುತ್ತಿರುವುದನ್ನು ತಡೆಗಟ್ಟಲು ದೇಶಪ್ರೇಮದ ಬೋಧನೆ ಹಾಗೂ ಆಲೋಚನಾ ಶುದ್ಧೀಕರಣದ ಪ್ರಾಮುಖ್ಯತೆಯತ್ತಲೂ ಅವರು ಬೊಟ್ಟು ಮಾಡಿದರು.

“ಇಂದು ಸಮಾಜದಲ್ಲಿ ಬೌದ್ಧಿಕತೆಯ ಮಟ್ಟವು ಕುಸಿಯುತ್ತಿದೆ. ಇದು ಕಳವಳಕಾರಿ ಸಂಗತಿಯಾಗಿದೆ. ನಾವು ಜನರಿಗೆ ಸೌಲಭ್ಯಗಳು ಹಾಗೂ ಹಲವಾರು ಬಗೆಯ ಆಹಾರಗಳನ್ನು ಒದಗಿಸಿದರೂ, ಅವರ ಹೃದಯದಲ್ಲಿನ ಕಲ್ಮಶ ಹಾಗೂ ಹಿಂಸಾ ಪ್ರವೃತ್ತಿಯನ್ನು ಗುಣಪಡಿಸಲು ಸಾಧ್ಯವಾಗದಿದ್ದರೆ, ಏನನ್ನೂ ಗುಣಪಡಿಸಲು ಸಾಧ್ಯವಿಲ್ಲ. ಯುವಜನರು ಹಿಂಸೆಯತ್ತ ವಾಲುತ್ತಿರುವುದು ಖೇದಕರ ಎಂದೂ ಪ್ರೇಮಾನಂದ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News