ಭಾರತ-ಪಾಕ್ ನಡುವಿನ ಉದ್ವಿಗ್ನತೆ ಮಧ್ಯೆ ರಕ್ಷಣಾ ಕವಾಯತು ನಡೆಸುವಂತೆ ರಾಜ್ಯಗಳಿಗೆ ನಿರ್ದೇಶಿಸಿದ ಕೇಂದ್ರ ಗೃಹ ಸಚಿವಾಲಯ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಮೇ 7ರಂದು ಅಣಕು ರಕ್ಷಣಾ ಕವಾಯತುಗಳನ್ನು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ನಿರ್ದೇಶನ ನೀಡಿದೆ ಎಂದು ಸರಕಾರಿ ಮೂಲಗಳು ಸೋಮವಾರ ತಿಳಿಸಿವೆ.
ಈ ಕವಾಯತಿನಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್‌ಗಳು ಮತ್ತು ಶತ್ರುಗಳ ದಾಳಿಯ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ನಾಗರಿಕ ರಕ್ಷಣಾ ಅಂಶಗಳ ಕುರಿತು ತರಬೇತಿ ನೀಡುವಂತೆ ಸೂಚಿಸಿದೆ.
ಇದಲ್ಲದೆ ಕ್ರ್ಯಾಶ್ ಬ್ಲ್ಯಾಕೌಟ್ ಕ್ರಮಗಳನ್ನು ಒದಗಿಸಬೇಕು, ಪ್ರಮುಖ ಸ್ಥಾವರಗಳು ಮತ್ತು ಪ್ರಮುಖ ಕಟ್ಟಡಗಳನ್ನು ಮರೆಮಾಚುವಿಕೆ ಮತ್ತು ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ನಡೆಸುವ ಬಗ್ಗೆ ಪೂರ್ವಾಭ್ಯಾಸ ಮಾಡಬೇಕು ಎಂದು ಹೇಳಿದೆ.
ಎಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಆ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿದೆ. ಪ್ರಧಾನಿ ಮೋದಿ ರಕ್ಷಣಾಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ.