×
Ad

ಮೋದಿ-ಟ್ರಂಪ್ ದೂರವಾಣಿ ಸಂಭಾಷಣೆ: ಉಭಯ ನಾಯಕರ ಭೇಟಿ ಸದ್ಯಕ್ಕಿಲ್ಲ

Update: 2025-10-23 07:42 IST

PC: PTI

ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ಸ್ನೇಹಪರ ಸಂಬಂಧದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದ್ಯಕ್ಕೆ ಪರಸ್ಪರ ಭೇಟಿಯಾಗುವ ಸಾಧ್ಯತೆ ಇಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಮೋದಿಯವರ ಜತೆ ದೀಪಾವಳಿ ಸಂದರ್ಭದಲ್ಲಿ ಟ್ರಂಪ್ ನಡೆಸಿದ ದೂರವಾಣಿ ಸಂಭಾಷಣೆ ವೇಳೆ ಪಾಕಿಸ್ತಾನ ವಿಷಯ ಚರ್ಚೆಯಾಗಿಲ್ಲ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ ವಾರಾಂತ್ಯದಲ್ಲಿ ಮಲೇಷ್ಯಾದಲ್ಲಿ ನಡೆಯುವ ಏಸಿಯಾನ್ (Asean)/ ಪೂರ್ವ ಏಷ್ಯಾ ದೇಶಗಳ ಶೃಂಗಸಭೆಯಲ್ಲಿ ಮೋದಿ ಭಾಗವಹಿಸುವ ಸಾಧ್ಯತೆ ಇಲ್ಲ. ಬಿಹಾರ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ, ಶೃಂಗಸಭೆಯಲ್ಲಿ ಭಾಗವಹಿಸುವ ಬದಲು ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ವಿಧಾನದಲ್ಲಿ ಭಾಷಣ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಾರ್ಷಿಕವಾಗಿ ನಡೆಯುವ ಪೂರ್ವ ಏಷ್ಯಾ ಶೃಂಗದಲ್ಲಿ ಭಾಗವಹಿಸಲು ಮಲೇಷ್ಯಾಗೆ ತೆರಳುವುದಾಗಿ ಟ್ರಂಪ್ ಪ್ರಕಟಿಸಿದ್ದಾರೆ. ಆದರೆ ಮೋದಿಯವರು ಈ ಶೃಂಗದಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲದಿರುವುದರಿಂದ ಸದ್ಯ ಟ್ರಂಪ್ ಜತೆ ಮೋದಿಯವರ ಮುಖಾಮುಖಿ ಚರ್ಚೆ ಇಲ್ಲ ಎಂದು ಹೇಳಲಾಗಿದೆ. ಮೋದಿಯವರು ಮುಂದಿನ ತಿಂಗಳು ಆಫ್ರಿಕಾದಲ್ಲಿ ನಡೆಯುವ ಜಿ20 ಶೃಂಗದಲ್ಲಿ ಭಾಗವಹಿಸಲಿದ್ದು, ಇಲ್ಲಿ ಟ್ರಂಪ್ ಭಾಗವಹಿಸುತ್ತಿಲ್ಲ.

ಪೂರ್ವ ಏಷ್ಯಾ ದೇಶಗಳ ಶೃಂಗವನ್ನು ಮೋದಿ ತಪ್ಪಿಸಿಕೊಳ್ಳುವುದು ಅಪರೂಪ. ಈ ತಿಂಗಳ ಆರಂಭದಲ್ಲಿ ಟ್ರಂಪ್ ಅಧ್ಯಕ್ಷೆಯಲ್ಲಿ ನಡೆದ ಗಾಝಾ ಶಾಂತಿ ಶೃಂಗದಲ್ಲಿ ಭಾಗವಹಿಸುವಂತೆ ಈಜಿಪ್ಟ್ ನೀಡಿದ್ದ ಆಹ್ವಾನವನ್ನು ಮೋದಿ ತಿರಸ್ಕರಿಸಿದ್ದರು. ಯಾವುದೇ ವಾಪಾರ ಒಪ್ಪಂದಕ್ಕೆ ಬರುವ ಮುನ್ನ ಟ್ರಂಪ್ ಜತೆಗಿನ ವೈಯಕ್ತಿಕ ಭೇಟಿಗೆ ಭಾರತ ಆಸಕ್ತಿ ತೋರಿಸುತ್ತಿಲ್ಲ.

ದೀಪಾವಳಿ ಪ್ರಯುಕ್ತ ಮೋದಿಯವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾಗಿ ಟ್ರಂಪ್ ಹೇಳಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧವನ್ನು ತಪ್ಪಿಸುವ ಅಗತ್ಯತೆ ಬಗ್ಗೆ ಚರ್ಚಿಸಿದ್ದಾಗಿ ಟ್ರಂಪ್ ತಿಳಿಸಿದ್ದಾರೆ. ಆದರೆ ಪಾಕಿಸ್ತಾನ ವಿಚಾರ ಉಭಯ ನಾಯಕರ ನಡುವಿನ ದೂರವಾಣಿ ಸಂಭಾಷಣೆ ವೇಳೆ ಪ್ರಸ್ತಾಪವಾಗಿಲ್ಲ ಎಂದು ಭಾರತೀಯ ಮೂಲಗಳು ಸ್ಪಷ್ಟಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News