ಕಳೆದ ಎರಡು ದಶಕಗಳಲ್ಲಿ ಮಾಸಿಕ ಕೌಟುಂಬಿಕ ವೆಚ್ಚಗಳು ಎಷ್ಟು ಹೆಚ್ಚಿವೆ?: ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಗ್ರಾಮೀಣ ಬಳಕೆಯಲ್ಲಿ ತೀವ್ರ ಏರಿಕೆಯೊಂದಿಗೆ ಕಳೆದ ಎರಡು ದಶಕಗಳಲ್ಲಿ ಗ್ರಾಮೀಣ ಮತ್ತು ನಗರ ಕುಟುಂಬಗಳಲ್ಲಿ ಸರಾಸರಿ ಮಾಸಿಕ ವೆಚ್ಚಗಳ ನಡುವಿನ ವ್ಯತ್ಯಾಸಗಳು ಸಂಕುಚಿತಗೊಂಡಿವೆ ಎನ್ನುವುದನ್ನು 11 ವರ್ಷಗಳ ವಿರಾಮದ ಬಳಿಕ ಬಿಡುಗಡೆಗೊಂಡಿರುವ ಪ್ರಮುಖ ವೆಚ್ಚ ದತ್ತಾಂಶಗಳು ತೋರಿಸಿವೆ.
2022-23ರಲ್ಲಿ ಸರಾಸರಿ ತಲಾ ಮಾಸಿಕ ಕೌಟುಂಬಿಕ ಬಳಕೆ ವೆಚ್ಚ (ಎಂಪಿಸಿಇ)ವು ಗ್ರಾಮೀಣ ಭಾರತದಲ್ಲಿ 3,773 ರೂ. ಮತ್ತು ನಗರ ಪ್ರದೇಶಗಳಲ್ಲಿ 6,459 ರೂ.ಗಳಾಗಿದ್ದವು. ಗ್ರಾಮೀಣ ಮತ್ತು ನಗರ ವೆಚ್ಚಗಳ ನಡುವಿನ ಅಂತರವು 2011-12ರಲ್ಲಿದ್ದ ಶೇ.83.9,2009-10ರಲ್ಲಿದ್ದ ಶೇ.88.2 ಮತ್ತು 2004-05ರಲ್ಲಿದ್ದ ಶೇ.90.8ರಿಂದ ಶೇ.71.2ಕ್ಕೆ ಇಳಿಕೆಯಾಗಿತ್ತು.
18 ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸರಾಸರಿ ಎಂಪಿಸಿಇ ಆರು ಪಟ್ಟು ಹೆಚ್ಚಾಗಿತ್ತು,ಇದು ನಗರ ಪ್ರದೇಶಗಳಿಗಿಂತ ಅಧಿಕವಾಗಿದೆ ಎನ್ನುವುದನ್ನು ಸಾಂಖ್ಯಿಕ ಸಚಿವಾಲಯದ ವೆಬ್ಸೈಟ್ ನಲ್ಲಿಯ ಫ್ಯಾಕ್ಟ್ಶೀಟ್ ತೋರಿಸುತ್ತಿದೆ. 2004-05ರಲ್ಲಿ ವೆಚ್ಚವು ಗ್ರಾಮೀಣ ಪ್ರದೇಶಗಳಲ್ಲಿ 579 ರೂ. ಮತ್ತು ನಗರ ಪ್ರದೇಶಗಳಲ್ಲಿ 1,105 ರೂ. ಆಗಿತ್ತು. ಇದು ಗ್ರಾಮೀಣ ಪ್ರದೇಶಗಳಲ್ಲಿ ಶೇ.552 ಮತ್ತು ನಗರ ಪ್ರದೇಶಗಳಲ್ಲಿ ಶೇ.484ರಷ್ಟು ಏರಿಕೆಯನ್ನು ಸೂಚಿಸುತ್ತದೆ.
ಆ.2022 ಮತ್ತು ಜು.2023ರ ನಡುವೆ ಕೌಟುಂಬಿಕ ಬಳಕೆ ವೆಚ್ಚ ಸಮೀಕ್ಷೆ (ಎಚ್ಸಿಇಎಸ್)ಯನ್ನು ನಡೆಸಲಾಗಿತ್ತು. ಜಿಡಿಪಿ,ಚಿಲ್ಲರೆ ಹಣದುಬ್ಬರ ಮತ್ತು ಬಡತನ ಮಟ್ಟಗಳಂತಹ ನಿರ್ಣಾಯಕ ಆರ್ಥಿಕ ಸೂಚಕಗಳನ್ನು ನಿರ್ಣಯಿಸುವಲ್ಲಿ ದತ್ತಾಂಶಗಳು ಪ್ರಮುಖವಾಗಿವೆ.
2022-23ರ ಅವಧಿಯಲ್ಲಿ ಭಾರತದ ಗ್ರಾಮೀಣ ಜನಸಂಖ್ಯೆಯ ತಳಮಟ್ಟದ ಶೇ.5ರಷ್ಟು ಜನರು 1,373 ರೂ.ಗಳ ಸರಾಸರಿ ಎಂಪಿಸಿಇ ಹೊಂದಿದ್ದರೆ ನಗರ ಪ್ರದೇಶಗಳಲ್ಲಿಯ ಇದೇ ವರ್ಗದಲ್ಲಿ ಅದು 2,001 ರೂ.ಆಗಿತ್ತು. ಗ್ರಾಮೀಣ ಜನಸಖ್ಯೆಯ ಅಗ್ರ ಶೇ.5ರಷ್ಟು ಜನರು 10,501 ರೂ.ಗಳ ಸರಾಸರಿ ಎಂಪಿಸಿಇ ಹೊಂದಿದ್ದರೆ ನಗರ ಪ್ರದೇಶಗಳಲ್ಲಿಯ ಇದೇ ವರ್ಗದಲ್ಲಿ ಅದು 20,824 ರೂ.ಆಗಿತ್ತು.
ವಿವಿಧ ರಾಜ್ಯಗಳಲ್ಲಿಯ ವೆಚ್ಚದ ತುಲನಾತ್ಮಕ ಅಧ್ಯಯನವು ವೆಚ್ಚವು ಸಿಕ್ಕಿಮ್ನಲ್ಲಿ ಗರಿಷ್ಠ (ಗ್ರಾಮೀಣದಲ್ಲಿ 7,731 ರೂ. ಮತ್ತು ನಗರ ಪ್ರದೇಶದಲ್ಲಿ 12,105 ರೂ.) ಮತ್ತು ಛತ್ತೀಸ್ಗಡದಲ್ಲಿ ಕನಿಷ್ಠ (ಗ್ರಾಮೀಣದಲ್ಲಿ 2,466ರೂ. ಮತ್ತು ನಗರ ಪ್ರದೇಶದಲ್ಲಿ 4,483 ರೂ.) ಎನ್ನುವುದನ್ನು ತೋರಿಸಿದೆ.
ಸರಾಸರಿ ಮಾಸಿಕ ಆಹಾರ ವೆಚ್ಚಗಳು 1,750 ರೂ.(ಗ್ರಾಮೀಣ) ಮತ್ತು 2,530 ರೂ.(ನಗರ) ಮತ್ತು ಆಹಾರೇತರ ವೆಚ್ಚಗಳು 2,023 ರೂ.(ಗ್ರಾಮೀಣ) ಮತ್ತು 3,929 ರೂ.(ನಗರ)ಗಳಾಗಿವೆ.
ಕೌಟುಂಬಿಕ ಬಳಕೆ ವೆಚ್ಚ ಸಮೀಕ್ಷೆಗಳು ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುತ್ತವೆ,ಆದರೆ 2017-18ರ ದತ್ತಾಂಶಗಳನ್ನು ದತ್ತಾಂಶ ಗುಣಮಟ್ಟ ಸಮಸ್ಯೆಯಿಂದಾಗಿ ಬಿಡುಗಡೆಗೊಳಿಸಿರಲಿಲ್ಲ. ಕೊನೆಯದಾಗಿ 2011-12ರ ದತ್ತಾಂಶಗಳನ್ನು ಬಹಿರಂಗಗೊಳಿಸಲಾಗಿತ್ತು.