ಸಚಿವ ವಿಜಯ್ ಶಾ ವಿರುದ್ಧ ಎಫ್ಐಆರ್ ದಾಖಲಿಸಲು ಮಧ್ಯಪ್ರದೇಶ ಹೈಕೋರ್ಟ್ ಆದೇಶ
ಮಧ್ಯಪ್ರದೇಶದ ಸಚಿವ ಕನ್ವರ್ ವಿಜಯ್ ಶಾ ಮತ್ತು ಕರ್ನಲ್ ಸೋಫಿಯಾ ಖುರೇಷಿ | Photo : PTI, X/@KrVijayShah
ಭೋಪಾಲ್ : ಪಾಕಿಸ್ತಾನದ ವಿರುದ್ಧದ ʼಆಪರೇಷನ್ ಸಿಂಧೂರʼ ಬಗ್ಗೆ ಇತ್ತೀಚೆಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಸಚಿವ ಕನ್ವರ್ ವಿಜಯ್ ಶಾ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಮಧ್ಯಪ್ರದೇಶ ಹೈಕೋರ್ಟ್ ಬುಧವಾರ ಆದೇಶ ನೀಡಿದೆ.
ಸಚಿವರ ವಿವಾದಾತ್ಮಕ ಹೇಳಿಕೆಯ ಬಗ್ಗೆ ಪತ್ರಿಕೆ ವರದಿಗಳ ಆಧಾರದ ಮೇಲೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ನ್ಯಾಯಮೂರ್ತಿ ಅತುಲ್ ಶ್ರೀಧರನ್, ಸಚಿವರ ಹೇಳಿಕೆಗಳು ಅಪಾಯಕಾರಿಯಾಗಿದೆ. ಧಾರ್ಮಿಕ ಆಧಾರದ ಮೇಲೆ ದ್ವೇಷವನ್ನು ಕಾರುವುದರ ವಿರುದ್ಧ, ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 196 ರ ಅಡಿಯಲ್ಲಿ ಈ ಪ್ರಕರಣವು ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸಬಹುದು ಎಂದು ಅಭಿಪ್ರಾಯಪಟ್ಟರು.
ಈ ಕುರಿತು ಪ್ರಕರಣ ದಾಖಲಿಸಿ ಸಂಜೆಯೊಳಗೆ ಎಫ್‌ಐಆರ್ ಸಲ್ಲಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ನೀಡಿದರು. ಒಂದು ವೇಳೆ ಆದೇಶ ಪಾಲಿಸಲು ವಿಫಲವಾದರೆ, ಡಿಜಿಪಿ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆ ಅಡಿಯಲ್ಲಿ ವಿಚಾರಣೆ ಮಾಡಬೇಕಾದೀತು ಎಂದು ನ್ಯಾಯಮೂರ್ತಿ ಅತುಲ್ ಶ್ರೀಧರನ್ ಎಚ್ಚರಿಕೆ ನೀಡಿದರು.
ನ್ಯಾಯಾಲಯವು ಕೇವಲ ಮಾಧ್ಯಮ ವರದಿಗಳ ಆಧಾರದ ಮೇಲೆ ಕ್ರಮ ಕೈಗೊಂಡಿದೆ ಎಂದು ಅಡ್ವೊಕೇಟ್ ಜನರಲ್ ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಶ್ರೀಧರನ್, "ಈಗ ನೀವು ಹಾಗೆ ಹೇಳಿರುವುದರಿಂದ, ನಾವು ಆದೇಶಕ್ಕೆ ವೀಡಿಯೊಗಳ ಲಿಂಕ್‌ಗಳನ್ನು ಸೇರಿಸುತ್ತೇವೆ. ನಾನು ನಾಳೆ ಜೀವಂತವಾಗಿ ಇಲ್ಲದೇ ಇರಬಹುದು”, ಎಂದು ವಿಷಯದ ತುರ್ತುಸ್ಥಿತಿಯನ್ನು ಒತ್ತಿ ಹೇಳಿದರು.
ನಾಲ್ಕು ಗಂಟೆಗಳ ಸಮಯವಿದೆ ಎಂದು ಪೊಲೀಸರಿಗೆ ನಿರ್ದೇಶನ ನೀಡಿದ ನ್ಯಾಯಾಲಯವು, ನಾಳೆ ಪ್ರಕರಣವನ್ನು ವಿಚಾರಣೆ ತೆಗೆದುಕೊಳ್ಳುವ ಸಾಧ್ಯತೆಯಿದೆ.