ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಕೇಂದ್ರ ಸರ್ಕಾರದಿಂದ ಉನ್ನತ ಪದವಿಗಳ ಆಫರ್?
ಶಶಿ ತರೂರ್ | PTI
ಹೊಸದಿಲ್ಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿಕೊಂಡು ಬಂದಿರುವ ತಿರುವನಂತಪುರಂ ನ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಕೇಂದ್ರ ಸರ್ಕಾರವು ವಿವಿಧ ಉನ್ನತ ಹುದ್ದೆಗಳ ಅವಕಾಶವನ್ನು ಮುಂದಿಟ್ಟಿದೆ ಎಂದು media one ಮಲಯಾಳಂ ನ್ಯೂಸ್ ಚಾನಲ್ ವರದಿ ಮಾಡಿದೆ.
ಅಮೆರಿಕಾದೊಂದಿಗಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ ಅಮೆರಿಕಾಕ್ಕೆ ವಿಶೇಷ ಪ್ರತಿನಿಧಿ ಅಥವಾ ಜಿ20 ದೇಶಗಳ ಶೆರ್ಪಾ ಪದವಿ ಅಥವಾ ಪ್ರತ್ಯೇಕ ವಿದೇಶಿ ಪ್ರತಿನಿಧಿ ಇತ್ಯಾದಿ ಹುದ್ದೆಗಳನ್ನು ಬಿಜೆಪಿ ತರೂರ್ ಮುಂದಿಟ್ಟಿದೆ ಎಂದು media one ವರದಿ ಮಾಡಿದೆ.
ಆದರೆ, ಈ ಬಗ್ಗೆ ತಮ್ಮ ಪಕ್ಷದೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಅವಕಾಶದ ಬಾಗಿಲನ್ನು ಕಾಂಗ್ರೆಸ್ ಮುಚ್ಚಿದೆ ಎಂದೂ ಮಾಧ್ಯಮ ವರದಿ ಹೇಳಿದೆ.
ಈ ಯಾವುದೇ ಹುದ್ದೆಯನ್ನು ತರೂರ್ ಒಪ್ಪಿಕೊಂಡರೂ, ತರೂರ್ ಕೇಂದ್ರ ಸರ್ಕಾರದ ಜೊತೆಗೆ ಕೆಲಸ ಮಾಡಬೇಕಾಗುತ್ತದೆ. ಈಗಾಗಲೇ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಭಾರತ ಸರಕಾರದ ಅಂತರಾಷ್ಟ್ರೀಯ ನಿಯೋಗದ ಮುಖ್ಯಸ್ಥರಾಗಿ ತರೂರ್ ವಿದೇಶ ಪ್ರವಾಸ ಕೈಗೊಂಡಿದ್ದರು. ಇದು, ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.
ಈಗಾಗಲೇ ಶಶಿ ತರೂರ್ ಕಾಂಗ್ರೆಸ್ ಸಂಸದರಾಗಿದ್ದರೂ ಪ್ರಧಾನಿ ಮೋದಿಯವರ ವಕ್ತಾರ ಎಂದೇ ಗುರುತಿಸಲ್ಪಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ವಿದೇಶಾಂಗ ವ್ಯವಹಾರಗಳ ವಿಷಯದಲ್ಲಿ ಮೋದಿ ಸರಕಾರವೂ ಶಶಿ ತರೂರ್ ರನ್ನು ಆಗಾಗ ಬೇರೆ ಬೇರೆ ರೀತಿಯಲ್ಲಿ ಬಳಸಿಕೊಳ್ಳುತ್ತಲೇ ಇದೆ. ಅವರೂ ಬಹಳ ಖುಷಿಯಿಂದಲೇ ಸರಕಾರ ಹೇಳಿದ್ದೆಲ್ಲವನ್ನೂ ಮಾಡುತ್ತಿದ್ದಾರೆ. ಹೇಳಿಕೆಗಳಲ್ಲಿ, ಬರಹಗಳಲ್ಲಿ ಮೋದಿ ಸರಕಾರವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಈಗ ತರೂರ್ ತಮ್ಮ ಪುಸ್ತಕವೊಂದರ ಆಧರಿತ ಟಿವಿ ಕಾರ್ಯಕ್ರಮದ ವಿಷಯವಾಗಿ ರಷ್ಯಾಕ್ಕೆ ಖಾಸಗಿ ಭೇಟಿಗೆ ಹೋಗಿದ್ದಾರೆ. ಅಲ್ಲೂ ಅವರು ರಷ್ಯಾ ವಿದೇಶಾಂಗ ಸಚಿವರ ಸಹಿತ ಉನ್ನತ ಸರಕಾರೀ ಪ್ರತಿನಿಧಿಗಳನ್ನು ಭೇಟಿಯಾಗಿ ಭಾರತ ಸರಕಾರದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಬಗ್ಗೆ ಮಾತಾಡಿದ್ದಾರೆ ಎಂದು ವರದಿಯಾಗಿದೆ. ಅಲ್ಲಿ ಅವರು ಫ್ರೆಂಚ್ ಭಾಷೆಯಲ್ಲಿ ಪಾಕಿಸ್ತಾನದ ವಿರುದ್ಧ ಹರಿಹಾಯ್ದ ವಿಡಿಯೋ ಭಾರತದಲ್ಲಿ ವೈರಲ್ ಆಗಿತ್ತು. ಅದನ್ನು ಬಿಜೆಪಿ ನಾಯಕರು, ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತರೂರ್ ಗುಣಗಾನ ಮಾಡಿದ್ದರು.
ಈಗ ತರೂರ್ ಗೆ ಸರಕಾರದಿಂದ ಅಧಿಕೃತವಾಗಿಯೇ ಹುದ್ದೆ ಕೊಡುವ ಆಫರ್ ಬಂದಿದೆ ಎಂದು ವರದಿಯಾಗಿದೆ.
ಆದರೆ ಈ ಬಗ್ಗೆ ಶಶಿ ತರೂರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.