ಹದಿಹರೆಯದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಮುಂಬೈನ ಶಿಕ್ಷಕಿಯ ಬಂಧನ
ಸಾಂದರ್ಭಿಕ ಚಿತ್ರ | PC : freepik.com
ಮುಂಬೈ: ಹದಿನಾರು ವರ್ಷ ವಯಸ್ಸಿನ ವಿದ್ಯಾರ್ಥಿಯೊಬ್ಬನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಮುಂಬೈನ ಪ್ರತಿಷ್ಠಿತ ಶಾಲೆಯೊಂದರ 40 ವರ್ಷ ವಯಸ್ಸಿನ ಶಿಕ್ಷಕಿಯನ್ನು ಬುಧವಾರ ಬಂಧಿಸಲಾಗಿದೆ. ಆಕೆಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಶಿಕ್ಷಕಿಯ ಲೈಂಗಿಕ ಕಿರುಕುಳದ ಕುರಿತು ಸಂತ್ರಸ್ತ ವಿದ್ಯಾರ್ಥಿಯು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆಬಳಿಕ ಸಂತ್ರಸ್ತ ವಿದ್ಯಾರ್ಥಿಯ ಕುಟುಂಬಿಕರು ದೂರು ದಾಖಲಿಸಿದ್ದರು.
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾಮೂಹಿಕ ನೃತ್ಯ ಕಲಿಸುತ್ತಿದ್ದ ಸಂದರ್ಭದಲ್ಲಿ ಸಂತ್ರಸ್ತ ಬಾಲಕನೊಂದಿಗೆ ಆರೋಪಿ ಶಿಕ್ಷಕಿಗೆ ಸಂಪರ್ಕವಾಗಿತ್ತು. ಈ ಶಿಕ್ಷಕಿಯು ಬಾಲಕನನ್ನು ಮುಂಬೈನ ವಿವಿಧ ಪಂಚತಾರಾ ಹೋಟೆಲ್‌ಗಳಿಗೆ ಕರೆದೊಯ್ಯುತ್ತಿದ್ದಳೆಂದು ಮೂಲಗಳು ತಿಳಿಸಿವೆ.
ಕಳೆದೊಂದು ವರ್ಷದಿಂದ ಶಿಕ್ಷಕಿಯು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಳು. 2023ರ ಡಿಸೆಂಬರ್‌ನಲ್ಲಿ ಶಿಕ್ಷಕಿಗೆ ಸಂತ್ರಸ್ತ ವಿದ್ಯಾರ್ಥಿಯ ಸಂಪರ್ಕವಾಗಿತ್ತು ಮತ್ತು 2024ರಲ್ಲಿ ಆಕೆಯ ಆತನೊಂದಿಗೆ ಮೊದಲ ಬಾರಿಗೆ ಲೈಂಗಿಕ ಪೀಡನೆ ನೀಡಿದ್ದಳೆಂದು ಆರೋಪಿಸಲಾಗಿದೆ.
ಆರೋಪಿ ಶಿಕ್ಷಕಿಯು ಬಾಲಕನನ್ನು ತನ್ನ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಲೈಂಗಿಕ ದೌರ್ಜನ್ಯವೆಸಗುತ್ತಿದ್ದಳು. ಅದಕ್ಕೆ ಮುನ್ನ ಆತನಿಗೆ ಮದ್ಯವನ್ನು ಕುಡಿಸುತ್ತಿದ್ದಳೆಂದು ಪೊಲೀಸರು ಆರೋಪಿಸಿದ್ದಾರೆ.
ಇದರಿಂದಾಗಿ ಬಾಲಕನಲ್ಲಿ ತೀವ್ರ ಉದ್ವೇಗದ ಲಕ್ಷಣಗಳು ಕಾಣಿಸಿಕೊಳ್ಳತೊಡಗಿದವು. ಆಗ ಶಿಕ್ಷಕಿಯು ಆತನಿಗೆ ಉದ್ವೇಗನಿವಾರಕ ಮಾತ್ರೆಗಳನ್ನು ನೀಡುತ್ತಿದ್ದಳೆಂದು ಅವರು ಹೇಳಿದ್ದಾರೆ.
ಬಾಲಕನ ನಡವಳಿಕೆಯಲ್ಲಿ ಬದಲಾವಣೆಯನ್ನು ಗಮನಿಸಿದ ಆತನ ಕುಟುಂಬಿಕರು, ಆತನನ್ನು ತೀವ್ರವಾಗಿ ಪ್ರಶ್ನಿಸಿದಾಗ ನೈಜ ಸಂಗತಿ ಬಯಲಿಗೆ ಬಂದಿತು. ಆದರೆ ಬಾಲಕನು ಶೀಘ್ರದಲ್ಲೇ ಶಾಲೆಯಿಂದ ತೇರ್ಗಡೆಗೊಳ್ಳಲಿರುವುದರಿಂದ ಘಟನೆಯ ಬಗ್ಗೆ ದೂರು ನೀಡದಿರಲು ಅವರು ನಿರ್ಧರಿಸಿದ್ದರು.
ಆದರೆ ಬಾಲಕ ಬೋರ್ಡ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಬಳಿಕವೂ ಆತನನ್ನು ಸಂಪರ್ಕಿಸಲು ಯತ್ನಿಸಿದ್ದಳು. ಆಗ ಬಾಲಕನ ಕುಟುಂಬಿಕರು ಪೊಲೀಸರಿಗೆ ದೂರು ನೀಡಿದ್ದರು.