×
Ad

ನಾಗಪುರ ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಬೆದರಿಕೆಯ ಇಮೇಲ್

Update: 2025-07-22 20:27 IST

PC : X 

ನಾಗಪುರ: ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಹಾಗೂ ಭದ್ರತಾಪಡೆಗಳು ಬಿಗಿ ತಪಾಸಣೆಯನ್ನು ನಡೆಸಿದವು.

ಮುಂಜಾನೆ 6:30ಕ್ಕೆ ಲಭ್ಯವಾದ ಇಮೇಲ್ ಸಂದೇಶವೊಂದರಲ್ಲಿ, ನಾಗಪುರದ ವಿಮಾನನಿಲ್ದಾಣದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಒಂದನ್ನು ಸಿಗರೇಟ್ ಪ್ಯಾಕೇಟ್‌ನ ಸೋಗಿನಲ್ಲಿ ಇರಿಸಲಾಗಿದೆ ಎಂದು ಬೆದರಿಸಲಾಗಿತ್ತು.

ಈ ಇಮೇಲ್ ಸಂದೇಶವನ್ನು ಮೊದಲಿಗೆ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ (ಎಎಐ) ಸ್ವೀಕರಿಸಿತ್ತು. ಆನಂತರ ಈ ಸಂದೇಶವನ್ನು ನಾಗಪುರ ವಿಮಾನನಿಲ್ದಾಣದ ಅಧಿಕಾರಿಗಳಿಗೆ ತಕ್ಷಣವೇ ಫಾರ್ವರ್ಡ್ ಮಾಡಲಾಗಿತ್ತು. ಆನಂತರ ಸಂಬಂಧಪಟ್ಟ ಎಲ್ಲಾ ವಿಭಾಗಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿತ್ತು ಹಾಗೂ ತುರ್ತು ಪ್ರತಿಕ್ರಿಯಾ ತಂಡಗಳನ್ನು ತಕ್ಷಣವೇ ಕಾರ್ಯಪ್ರವೃತ್ತವಾದವು.ಬಾಂಬ್ ಪತ್ತೆ ಹಾಗೂ ವಿಲೇವಾರಿ ದಳ (ಬಿಡಿಡಿಎಸ್), ಸಿಐಎಸ್‌ಎಫ್ ಹಾಗೂ ಶ್ವಾನದಳ ಜೊತೆಗೆ ಸೋನೆಗಾಂವ್ ಪೊಲೀಸ್ ಠಾಣಾ ಪೊಲೀಸರು ವಿಮಾನ ನಿಲ್ದಾಣದಲ್ಲಿ ಸುಮಾರು ನಾಲ್ಕು ತಾಸುಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದರು. ಆದಾಗ್ಯೂ ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ಉಪಕರಣಗಳು ಪತ್ತೆಯಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಬ್ ಬೆದರಿಕೆಯ ಇಮೇಲ್ ಸಂದೇಶವು, ವಿಮಾನನಿಲ್ದಾಣದಲ್ಲಿ ತುಸು ಹೊತ್ತು ಆತಂಕದ ವಾತಾವರಣವನ್ನು ಸೃಷ್ಟಿಸಿತ್ತು. ಆದರೆ ಬಹುತೇಕವಾಗಿ ವಿಮಾನಗಳ ಸಂಚಾರದಲ್ಲಿ ಯಾವುದೇ ಮಹತ್ತರವಾದ ವಿಳಂಬ ಅಥವಾ ಅಡಚಣೆಯುಂಟಾಗಿಲ್ಲವೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News