ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನ ಪರ ಬೇಹುಗಾರಿಕೆ | ನೌಕಾಪಡೆಯ ಸಿಬ್ಬಂದಿ ವಿಶಾಲ್ ಯಾದವ್ ಬಂಧನ
ವಿಶಾಲ್ ಯಾದವ್ PC: x.com/ndtv
ಹೊಸದಿಲ್ಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಮತ್ತು ಹಲವು ವರ್ಷಗಳಿಂದ ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಐಎಸ್ಐಗೆ ಮಾಹಿತಿ ರವಾನಿಸುತ್ತಿದ್ದ ಆರೋಪದಲ್ಲಿ ನೌಕಾಪಡೆಯ ಕೇಂದ್ರ ಕಚೇರಿಯ ಸಿಬ್ಬಂದಿಯೊಬ್ಬನನ್ನು ಬಂಧಿಸಲಾಗಿದೆ.
ಆರೋಪಿಯ ಮೊಬೈಲ್ ಫೋನ್ ನಿಂದ ಪಡೆದ ದತ್ತಾಂಶಗಳಿಂದ ಆರೋಪಿ ವಿಶಾಲ್ ಯಾದವ್, ನೌಕಾಪಡೆಗೆ ಮತ್ತು ಇತರ ರಕ್ಷಣಾ ಘಟಕಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಪರ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಗೆ ಹಣಕ್ಕಾಗಿ ನೀಡುತ್ತಿದ್ದ ಅಂಶ ದೃಢಪಟ್ಟಿದೆ.
ನೌಕಾಪಡೆಯ ಕೇಂದ್ರ ಕಚೇರಿಯಲ್ಲಿ ಗುಮಾಸ್ತರಾಗಿದ್ದ ಯಾದವ್ ಹರ್ಯಾಣದ ನಿವಾಸಿ. ರಾಜಸ್ಥಾನ ಪೊಲೀಸ್ ಪಡೆಯ ಗುಪ್ತಚರ ವಿಭಾಗ ಈತನನ್ನು ಬಂಧಿಸಿದೆ.
ಪಾಕಿಸ್ತಾನಿ ಗುಪ್ತಚರ ಏಜೆನ್ಸಿಗಳ ಬೇಹುಗಾರಿಕೆ ಚಟುವಟಿಕೆಗಳ ಮೇಲೆ ರಾಜಸ್ಥಾನ ಪೊಲೀಸ್ ಪಡೆಯ ಸಿಐಡಿ ಗುಪ್ತಚರ ವಿಭಾಗ ನಿರಂತರ ನಿಗಾ ವಹಿಸಿದೆ ಎಂದು ಹಿರಿಯ ಅಧಿಕಾರಿ ವಿಷ್ಣುಕಾಂತ್ ಗುಪ್ತಾ ಹೇಳಿದ್ದಾರೆ. ಈ ಕಣ್ಗಾವಲು ವೇಳೆ ಯಾದವ್ ಈ ಜಾಲದಲ್ಲಿ ನಿರತನಾಗಿರುವುದು ಕಂಡುಬಂದಿದೆ. ಈತ ಪಾಕಿಸ್ತಾನದ ಐಎಸ್ಐ ಏಜೆಂಟ್ ಮಹಿಳೆ ಜತೆ ಜಾಲತಾಣದಲ್ಲಿ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಪ್ರಿಯಾಶರ್ಮಾ ಎಂದು ಗುರುತಿಸಿಕೊಂಡಿರುವ ಮಹಿಳೆ, ಯಾದವ್ ಪೂರೈಸಿದ ಪ್ರಮುಖ ರಹಸ್ಯ ಮಾಹಿತಿಗಾಗಿ ಹಣ ನೀಡುತ್ತಿದ್ದಳು. ಆನ್ಲೈನ್ ಗೇಮಿಂಗ್ ಚಟ ಹೊಂದಿದ್ದ ವಿಶಾಲ್ ಯಾದವ್ ಗೆ ತನ್ನ ನಷ್ಟವನ್ನು ತುಂಬಿಕೊಳ್ಳುವ ಸಲುವಾಗಿ ಹಣದ ಅಗತ್ಯತೆ ಇತ್ತು ಎನ್ನುವುದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ.
ಕ್ರಿಪ್ಟೊ ಕರೆನ್ಸಿ ವಹಿವಾಟು ಖಾತೆಯ ಮೂಲಕ ಮತ್ತು ಬ್ಯಾಂಕ್ ಖಾತೆಯ ಮೂಲಕವೂ ಹಣ ಪಡೆಯುತ್ತಿದ್ದ. ಜೈಪುರದ ಕೇಂದ್ರೀಯ ತನಿಖಾ ಕೇಂದ್ರದಲ್ಲಿ ವಿವಿಧ ಗುಪ್ತಚರ ಏಜೆನ್ಸಿಗಳು ಯಾದವ್ ವಿಚಾರಣೆ ನಡೆಸಲಿವೆ. ಈ ಜಾಲದಲ್ಲಿ ಇತರ ಯಾರು ಷಾಮೀಲಾಗಿದ್ದಾರೆ ಹಾಗೂ ಸೋರಿಕೆಯಾಗಿರುವ ಮಾಹಿತಿ ಎಷ್ಟು ಸೂಕ್ಷ್ಮ ಎಂಬ ಬಗ್ಗೆ ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ.