ರೈತರ ಪ್ರತಿಭಟನೆ ಕುರಿತ ಪೋಸ್ಟ್ : ಮಾನನಷ್ಟ ಮೊಕದ್ದಮೆ ರದ್ದು ಕೋರಿ ಬಿಜೆಪಿ ಸಂಸದೆ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿ ವಜಾ
ಕಂಗನಾ ರಣಾವತ್ | PC : PTI
ಚಂಡೀಗಢ : ರೈತರ ಪ್ರತಿಭಟನೆಯ ಕುರಿತ ಪೋಸ್ಟ್‌ಗೆ ಸಂಬಂಧಿಸಿ ತನ್ನ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಮತ್ತು ಬಟಿಂಡಾ ನ್ಯಾಯಾಲಯದ ಸಮನ್ಸ್ ಆದೇಶ ರದ್ದುಗೊಳಿಸುವಂತೆ ಕೋರಿ ಬಿಜೆಪಿ ಸಂಸದೆ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ವಜಾಗೊಳಿಸಿದೆ.
ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ದಾಖಲಾಗಿರುವ ಕ್ರಿಮಿನಲ್ ದೂರು ಹಾಗೂ ಸಮನ್ಸ್ ಆದೇಶ ಮತ್ತು ಈ ಪ್ರಕರಣದ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕಂಗನಾ ರಣಾವತ್ ಕೋರಿದ್ದರು. ಆದರೆ ನ್ಯಾಯಮೂರ್ತಿ ತ್ರಿಭುವನ್ ದಹಿಯಾ ಅವರ ಪೀಠ ಅರ್ಜಿಯನ್ನು ವಜಾಗೊಳಿಸಿದೆ.
ʼಅರ್ಜಿದಾರೆ ಸೆಲೆಬ್ರಿಟಿಯಾಗಿದ್ದು, ರೀಟ್ವೀಟ್‌ನಲ್ಲಿ ಅವರ ಸುಳ್ಳು ಮತ್ತು ಮಾನನಷ್ಟ ಆರೋಪಗಳು ಪ್ರತಿವಾದಿಯ ಖ್ಯಾತಿಗೆ ಧಕ್ಕೆ ತಂದಿವೆ ಎಂಬ ನಿರ್ದಿಷ್ಟ ಆರೋಪಗಳಿವೆ. ಆದ್ದರಿಂದ ದೂರು ದಾಖಲಿಸಿರುವುದನ್ನು ದುರುದ್ದೇಶಪೂರಿತ ಎಂದು ಕರೆಯಲಾಗುವುದಿಲ್ಲʼ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
2022ರ ಫೆಬ್ರವರಿ 22ರಂದು ಬಟಿಂಡಾ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಕಂಗನಾ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು. ಆದರೆ, ವಿಚಾರಣಾ ನ್ಯಾಯಾಲಯ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 202 ಅನ್ನು ತಪ್ಪಾಗಿ ಅನ್ವಯಿಸಿದೆ ಎಂದು ವಾದಿಸಿ ಕಂಗನಾ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಕಂಗನಾ ವಿರುದ್ಧ ಬಹದ್ದೂರ್‌ಗಢ ಜಾಂಡಿಯನ್ ಗ್ರಾಮದ ಮಹಿಂದರ್ ಕೌರ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮಹಿಂದರ್ ಕೌರ್ ಅವರಿಗೆ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಹಣ ನೀಡಲಾಗಿದೆ ಎಂದು ರಣಾವತ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.