×
Ad

ಸಂಕೀರ್ಣ ಆದಿತ್ಯ ಎಲ್1 ಸೂರ್ಯಾನ್ವೇಷಣೆ ಹಿಂದಿರುವ ನಗುಮುಖದ, ಮೃದು ಹೃದಯಿ 'ನಿಗರ್ ಶಾಜಿ'

Update: 2024-01-07 21:40 IST

Photo : twitter

ಹೊಸದಿಲ್ಲಿ: ಮುಂಚೂಣಿ ಸಂಕೀರ್ಣ ವೈಜ್ಞಾನಿಕ ಅನ್ವೇಷಣೆಯಾಗಿದ್ದ ಭಾರತದ ಪ್ರಪ್ರಥಮ ಸೂರ್ಯ ಪರಿವೀಕ್ಷಣಾ ಉಪಗ್ರಹ ಆದಿತ್ಯ ಎಲ್1 ಅನ್ನು ಲ್ಯಾಂಗ್ರಾಂಗ್ ಬಿಂದು 1ರಲ್ಲಿ ಇಡುವ ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆಯ ನಿರ್ದೇಶಕಿಯಾಗಿದ್ದವರು ನಿಗರ್ ಶಾಜಿ. ಸೂರ್ಯನಿಗೆ ಬಾನಿನಲ್ಲೇ ನಮಸ್ಕಾರ ಮಾಡಲಿರುವ ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲು ಕಳೆದ ಎಂಟು ವರ್ಷಗಳಿಂದ ದಣಿವರಿಯದೆ ದುಡಿದಿರುವ ನಿಗರ್ ಶಾಜಿ ಸದಾ ನಗುಮುಖದ ಮೃದು ಹೃದಯಿ ಹೆಣ್ಣುಮಗಳು ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.

1987ರಲ್ಲಿ ಇಸ್ರೊ ಸಂಸ್ಥೆಯನ್ನು ಸೇರ್ಪಡೆಯಾಗಿದ್ದ ನಿಗರ್ ಶಾಜಿ, ಹಂತಹಂತವಾಗಿ ಮೇಲೇರಿ ಭಾರತದ ಪ್ರಪ್ರಥಮ ಸೂರ್ಯ ಯಾನದ ಯೋಜನೆಯ ನಿರ್ದೇಶಕಿಯಾಗಿದ್ದಾರೆ. ಇದಕ್ಕೂ ಮುನ್ನ 59 ವರ್ಷದ ಶಾಜಿ, ಈಗಲೂ ಕಾರ್ಯಾಚರಿಸುತ್ತಿರುವ ರಿಸೋರ್ಸ್ ಸ್ಯಾಟ್-2ಎಯ ಸಹ ಯೋಜನಾ ನಿರ್ದೇಶಕಿಯಾಗಿದ್ದರು. ಇದಲ್ಲದೆ, ಎಲ್ಲ ಕೆಳ ಕಕ್ಷೆ ಹಾಗೂ ಗ್ರಹಾನ್ವೇಷಣೆ ಯೋಜನೆಗಳ ಕಾರ್ಯಕ್ರಮ ನಿರ್ದೇಶಕಿಯೂ ಆಗಿದ್ದರು. ಆಂಧ್ರದ ಕರಾವಳಿ ಪ್ರದೇಶದಲ್ಲಿರುವ ಶ‍್ರೀಹರಿ ಕೋಟಾ ಉಡಾಯನ ಕೇಂದ್ರದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಶಾಜಿ, ನಂತರ ಬೆಂಗಳೂರಿನಲ್ಲಿರುವ ಯು.ಆರ್.ರಾವ್ ಉಪಗ್ರಹ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದರು. ಈ ಕೇಂದ್ರವು ಉಪಗ್ರಹಗಳನ್ನು ಅಭಿವೃದ‍್ಧಿಪಡಿಸುವಲ್ಲಿ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ.

ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಸೆಂಗೊಟ್ಟೈನಲ್ಲಿ ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದ ನಿಗರ್ ಶಾಜಿ, ಮದುರೈನ ಕಾಮರಾಜ್ ವಿಶ್ವವಿದ್ಯಾಲಯದಡಿಯ ತಿರುನ್ವೇಲಿಯ ಸರ್ಕಾರಿ ತಾಂತ್ರಿಕ ಕಾಲೇಜಿಗೆ ಸೇರ್ಪಡೆಯಾಗುವುದಕ್ಕೂ ಮುನ್ನ ಸೆಂಗೊಟ್ಟೈನಲ್ಲಿ ತಮ್ಮ ಶಾಲಾ ವಿದ್ಯಾಭ್ಯಾಸ ಪೂರೈಸಿದ್ದರು. ಕಾಮರಾಜ್ ವಿಶ್ವವಿದ್ಯಾಲಯದಿಂದ ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದ ಶಾಜಿ, ನಂತರ ಮೆಸ್ರಾದ ಬಿರ್ಲಾ ತಾಂತ್ರಿಕ ಸಂಸ್ಥೆಯಲ್ಲಿ ವಿದ್ಯುನ್ಮಾನ ಸ್ನಾತಕೋತ್ತರ ಪದವಿ ಪಡೆದರು.

ನಂತರ 1987ರಲ್ಲಿ ಇಸ್ರೊ ಸಂಸ್ಥೆಯನ್ನು ಸೇರ್ಪಡೆಯಾದ ನಿಗರ್ ಶಾಜಿ, ಬಾಹ್ಯಾಕಾಶ ಸಂಸ್ಥೆಯಲ್ಲಿ ಲಿಂಗ ತಾರತಮ್ಯ ಇರಬಹುದು ಎಂಬ ತಪ್ಪು ಕಲ್ಪನೆಯನ್ನು ತಳ್ಳಿ ಹಾಕುತ್ತಾರೆ. ನಾನು ಇಸ್ರೊದಲ್ಲಿ ಎಂದಿಗೂ ಲಿಂಗ ತಾರತಮ್ಯ ಎದುರಿಸಿಲ್ಲ. ನನ್ನ ಹಿರಿಯರ ನಿರಂತರ ಪ್ರೋತ್ಸಾಹದಿಂದಾಗಿ ನಾನಿಂದು ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ. “ತಂಡದ ನಾಯಕಿಯಾಗಿ, ಹಲವಾರು ಮಂದಿ ನನ್ನ ಕೈಕೆಳಗೆ ಕೆಲಸ ಮಾಡುತ್ತಾರೆ. ಹೀಗಾಗಿ, ನಾನವರನ್ನು ನನ್ನ ಹಿರಿಯರು ಬೆಳೆಸಿದಂತೆಯೇ ಬೆಳೆಸುತ್ತಿದ್ದೇನೆ” ಎನ್ನುತ್ತಾರೆ ಶಾಜಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News