ಭಾರತದ 3,300 ಸರ್ಕಾರಿ ಸೌರ ಗ್ರಿಡ್‌ಗಳ ಪೈಕಿ ಶೇ. 5 ಮಾತ್ರ ಕಾರ್ಯಾಚರಿಸುತ್ತಿವೆ: ಅಧ್ಯಯನ ವರದಿ
ಹೊಸದಿಲ್ಲಿ: ದೇಶದಲ್ಲಿರುವ ಸುಮಾರು 4,000 ಸೋಲಾರ್ ಮಿನಿ-ಗ್ರಿಡ್‌ಗಳ ಪೈಕಿ 3,300 ಗ್ರಿಡ್‌ಗಳು ಸರಕಾರಿ ಒಡೆತನದ ಗ್ರಿಡ್‌ಗಳಾಗಿದ್ದರೂ ಅವುಗಳಲ್ಲಿ ಶೇ. 5ರಷ್ಟು ಮಾತ್ರ ಕಾರ್ಯಾಚರಿಸುತ್ತಿವೆ ಎಂದು 'ದಿ ವಾಷಿಂಗ್ಟನ್ ಪೋಸ್ಟ್' ಪ್ರಕಟಿಸಿದ ಸ್ಮಾರ್ಟ್ ಪವರ್ ಇಂಡಿಯಾ ವರದಿಯಲ್ಲಿ ಹೇಳಲಾಗಿದೆ. ಈ ಸ್ಮಾರ್ಟ್ ಪವರ್ ಇಂಡಿಯಾ ಸಂಸ್ಥೆಯು ರಾಕ್‌ಫೆಲ್ಲರ್ ಫೌಂಡೇಶನ್ ಇದರ ಅಂಗಸಂಸ್ಥೆಯಾಗಿದೆ.
ಮೋದಿ ಸರ್ಕಾರದ ರಾಜಕೀಯ ಪ್ರಚಾರಗಳಲ್ಲಿ ಸೌರ ಶಕ್ತಿ ಪ್ರಮುಖ ಸ್ಥಾನ ಪಡೆಯುತ್ತದೆಯಾದರೂ ವಾಸ್ತವ ಮಾತ್ರ ಭಿನ್ನವಾಗಿದೆ. ಸೌರ ಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಪ್ರಮುಖ ದೇಶಗಳಲ್ಲಿ ಭಾರತ ಒಂದಾಗಿದೆ ಹಾಗೂ ಈ ಸೌರಶಕ್ತಿ ದೇಶದ ಬಡವರ ಮತ್ತು ಮಧ್ಯಮ ವರ್ಗದವರ ಜೀವನಗಳಲ್ಲಿ ಪರಿವರ್ತನೆ ತಂದಿದೆ ಎಂದು ಪ್ರಧಾನಿ ಮೋದಿ ತಮ್ಮ ಅಕ್ಟೋಬರ್ 2022 ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದರು.
ಕಳೆದ ವರ್ಷ ಮೋದಿ ತಮ್ಮ ತವರು ರಾಜ್ಯ ಗುಜರಾತ್‌ನ ಮೊಧೇರ ಗ್ರಾಮವು ದೇಶದ ಪ್ರಥಮ ಸಂಪೂರ್ಣ ಸೌರ ಶಕ್ತಿ ಬಳಸುವ ಗ್ರಾಮ ಎಂದು ಘೋಷಿಸಿದ್ದರು. ಗುಜರಾತ್ ಸರ್ಕಾರದ ಪ್ರಕಾರ ಈ ಗ್ರಾಮದ 1000 ಕ್ಕೂ ಅಧಿಕ ಮನೆಗಳಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲಾಗಿದೆ.
ಆದರೆ ಇಂತಹ ಸೌರ ಗ್ರಾಮಗಳ ಸ್ಥಿತಿಯನ್ನು ವರದಿ ಉಲ್ಲೇಖಿಸಿದೆಯಲ್ಲದೆ 2014ರಲ್ಲಿ ಬಿಹಾರದ ಮೊದಲ ಸೌರ ಗ್ರಾಮವನ್ನು ಘೋಷಿಸಲಾಗಿತ್ತಾದರೂ ಏಳು ವರ್ಷಗಳ ನಂತರ ಆ ಗ್ರಾಮದ ಸೌರ ಸ್ಟೇಷನ್ ದನದ ಕೊಟ್ಟಿಗೆಯಂತಾಗಿ ಮಾರ್ಪಾಟಾಗಿದೆ ಎಂದು ಮೊಂಗಬೇ-ಇಂಡಿಯಾ ವರದಿ ಮಾಡಿದ್ದನ್ನು ವಾಷಿಂಗ್ಟನ್ ಪೋಸ್ಟ್ ಉಲ್ಲೇಖಿಸಿದೆ. ಬಿಹಾರದ ಸಂಶೋಧಕ ಅವಿರಾಮ್ ಶರ್ಮ ತಮ್ಮ ವರದಿಯಲ್ಲಿ ತಿಳಿಸಿದಂತೆ ಬಿಹಾರದ ಈ ಗ್ರಾಮದ ಅರ್ಧಕ್ಕಿಂತಲೂ ಹೆಚ್ಚು ಸೌರ ಸಂಪರ್ಕಗಳು ಎರಡು ವರ್ಷಗಳೊಳಗೆ ನಿರುಪಯೋಗಿಯಾಗಿದ್ದವು.
ಜಾರ್ಖಂಡ್‌ನಲ್ಲಿರುವ 200ಕ್ಕೂ ಅಧಿಕ ಮಿನಿ ಸೌರ ಗ್ರಿಡ್‌ಗಳ ಪೈಕಿ ಕನಿಷ್ಠ ಶೇ 90ರಷ್ಟು ಕಾರ್ಯಾಚರಿಸುತ್ತಿಲ್ಲ ಎಂದು ವರದಿ ಹೇಳಿದೆ.
ಈ ಸೌರ ಪ್ಯಾನಲ್ ಮತ್ತು ಗ್ರಿಡ್‌ಗಳ ಬ್ಯಾಟರಿಗಳ ವಿಲೇವಾರಿ ವಿಚಾರವೂ ಕಳವಳಕಾರಿಯಾಗಿದೆ ಹಾಗೂ ಇವುಗಳನ್ನು ತ್ಯಾಜ್ಯಗುಂಡಿಗೆ ಹಾಕಿದ್ದಲ್ಲಿ ಅವುಗಳಲ್ಲಿರುವ ಹಾನಿಕಾರಕ ಅಂಶಗಳು ಸಮಸ್ಯೆ ಸೃಷ್ಟಿಸಬಹುದು ಎಂದು ತಜ್ಞರ ಹೇಳಿಕೆಗಳನ್ನು ಉಲ್ಲೇಖಿಸಿ ವರದಿ ವಿವರಿಸಿದೆ.