×
Ad

"ಮತ ಕಳ್ಳತನ' ಆರೋಪ | ಕಾಂಗ್ರೆಸ್ ನಾಯಕರ ಭೇಟಿಗೆ ಸಮಯ ನಿಗದಿಪಡಿಸಿದ ಚುನಾವಣಾ ಆಯೋಗ

ದಿಲ್ಲಿಯ ಪ್ರಧಾನ ಕಚೇರಿಗೆ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಪೊಲೀಸರು

Update: 2025-08-11 11:20 IST

Photo | hindustantimes

ಹೊಸದಿಲ್ಲಿ: ಕಾಂಗ್ರೆಸ್‌ ಪಕ್ಷದ ಮನವಿ ಮೇರೆಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಂವಾದಕ್ಕಾಗಿ ಸಭೆಯನ್ನು ನಿಗದಿಪಡಿಸಿದೆ. ಈ ಬಗ್ಗೆ ಆಯೋಗವು ಕಾಂಗ್ರೆಸ್‌ ನಾಯಕ ಹಾಗೂ ಸಂಸತ್‌ ಸದಸ್ಯ ಜೈರಾಮ್‌ ರಮೇಶ್ ಅವರಿಗೆ ಅಧಿಕೃತ ಪತ್ರ ಬರೆದಿದೆ.

ಪತ್ರದಲ್ಲಿ, ಕೆಲವು ರಾಜಕೀಯ ಪಕ್ಷಗಳ ಪರವಾಗಿ ಜೈರಾಮ್‌ ರಮೇಶ್ ಸಲ್ಲಿಸಿದ್ದ ಮನವಿಯ ಪ್ರಕಾರ ಈ ನೇಮಕಾತಿ ಮಂಜೂರು ಮಾಡಲಾಗಿದೆ ಎಂದು ತಿಳಿಸಲಾಗಿದೆ. ಸಭೆಯ ಕಾರ್ಯಸೂಚಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಸ್ಥಳಾವಕಾಶದ ಕಾರಣದಿಂದ ಸಭೆಗೆ ಹಾಜರಾಗಲಿರುವ 30 ಪ್ರತಿನಿಧಿಗಳ ಹೆಸರುಗಳು ಹಾಗೂ ಅವರ ವಾಹನ ಸಂಖ್ಯೆಗಳ ವಿವರವನ್ನು ಆಯೋಗವು ಕೇಳಿಕೊಂಡಿದೆ.

ಈ ಹಿನ್ನೆಲೆಯಲ್ಲಿ, 2024ರ ಲೋಕಸಭಾ ಚುನಾವಣೆಯಲ್ಲಿ ನಡೆದ “ಮತ ಕಳ್ಳತನ”ವನ್ನು ಖಂಡಿಸಲು, ವಿರೋಧ ಪಕ್ಷಗಳ ನೂರಾರು ಸಂಸದರು ಸೋಮವಾರ ಸಂಸತ್ತಿನಿಂದ ದಿಲ್ಲಿಯ ಭಾರತೀಯ ಚುನಾವಣಾ ಆಯೋಗದ ಪ್ರಧಾನ ಕಚೇರಿಯವರೆಗೆ ಮೆರವಣಿಗೆ ನಡೆಸುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಘೋಷಿಸಿದ್ದರು. ಆದರೆ, ದಿಲ್ಲಿ ಪೊಲೀಸರು ಈ ಮೆರವಣಿಗೆಗೆ ಅನುಮತಿ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಹಿಂದೂಸ್ತಾನ್ ಟೈಮ್ಸ್‌ಗೆ ಮಾಹಿತಿ ನೀಡಿದ ಹಿರಿಯ ಅಧಿಕಾರಿಯೊಬ್ಬರು, ಪೊಲೀಸ್ ಅನುಮತಿಗಾಗಿ ಯಾವುದೇ ಅಧಿಕೃತ ವಿನಂತಿ ಸಲ್ಲಿಸಲಾಗಿಲ್ಲ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News