ಪಹಲ್ಗಾಮ್ ದಾಳಿಗೆ ಪಾಕ್ ರಾಜಕೀಯ, ಸೇನಾ ಮುಖ್ಯಸ್ಥರ ಸೂಚನೆ: ಅಧಿಕಾರಿಗಳು
PC: PTI
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22ರಂದು 26 ಮಂದಿ ಅಮಾಯಕರ ಹತ್ಯೆಗೆ ಕಾರಣವಾದ ದಾಳಿ ಘಟನೆ ಪಾಕಿಸ್ತಾನದ ರಾಜಕೀಯ ಮತ್ತು ಸೇನಾ ಮುಖ್ಯಸ್ಥರು ನೀಡಿದ ಸೂಚನೆಯ ಅನ್ವಯ ಐಎಸ್ಐ ಮತ್ತು ಲಷ್ಕರ್-ಎ-ತೋಯ್ಬಾ ರೂಪಿಸಿದ ಸಂಚು ಆಗಿದ್ದು, ಉಗ್ರಗಾಮಿಗಳು ಅದನ್ನು ಕಾರ್ಯಗತಗೊಳಿಸಿದರು ಎಂದು ಭದ್ರತಾ ಸಂಸ್ಥೆಗಳ ಮೂಲಗಳು ಹೇಳಿವೆ.
26/11ರ ಮುಂಬೈ ದಾಳಿಯ ಮಾದರಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲು ಕೇವಲ ವಿದೇಶಿ ಉಗ್ರರನ್ನು ಮಾತ್ರವೇ ನಿಯೋಜಿಸುವಂತೆ ಐಎಸ್ಐ, ಪಾಕ್ ಮೂಲದ ಲಷ್ಕರ್ ಕಮಾಂಡರ್ ಸಾಜೀದ್ ಅವರಿಗೆ ನಿರ್ದಿಷ್ಟವಾಗಿ ಸೂಚನೆ ನೀಡಿತ್ತು. ಯಾವುದೇ ಕಾಶ್ಮೀರಿ ಉಗ್ರರನ್ನು ಬಳಸಿಕೊಳ್ಳಲಿಲ್ಲ. ಸ್ಥಳೀಯ ಉಗ್ರರನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಸೂಚನೆ ಇತ್ತು ಎಂದು ಮೂಲಗಳು ವಿವರಿಸಿವೆ.
ಪಾಕಿಸ್ತಾನದ ವಿಶೇಷ ಪಡೆಗಳ ಕಮಾಂಡೊ ಆಗಿ ಕೆಲಸ ಮಾಡಿದ್ದ ಸುಲೈಮನ್ ಎಂಬಾತನ ನೇತೃತ್ವದಲ್ಲಿ ದಾಳಿಕೋರರು 2022ರಲ್ಲಿ ಜಮ್ಮು ಪ್ರದೇಶದಲ್ಲಿ ವಾಸ್ತವ ನಿಯಂತ್ರಣ ರೇಖೆ ದಾಟುವ ಮುನ್ನ ಎಲ್ಇಟಿಯ ಮುರಿಡ್ಕೆ ಶಿಬಿರದಲ್ಲಿ ತರಬೇತಿ ಪಡೆದಿದ್ದರು. ಇತರ ಇಬ್ಬರು ಪಾಕಿಸ್ತಾನಿಗಳು ಕೂಡಾ ದಾಳಿ ತಂಡದಲ್ಲಿದ್ದರು ಎನ್ನಲಾಗಿದೆ.
ಸುಲೈಮನ್ ಏಪ್ರಿಲ್ 15ರಂದು ಥ್ರಾಲ್ ಅರಣ್ಯದಲ್ಲಿ ಇದ್ದ ಬಗ್ಗೆ ಮಾಹಿತಿ ಉಪಗ್ರಹ ಫೋನ್ ವಿಶ್ಲೇಷಣೆಯಿಂದ ದೃಢಪಟ್ಟಿದೆ. ಘಟನೆಗೆ ಕೆಲ ವಾರ ಮೊದಲು ಆತ ಬೈಸರಣ್ ಪ್ರದೇಶದ ಸನಿಹದಲ್ಲೇ ಇದ್ದ ಎನ್ನುವುದಕ್ಕೆ ಇದು ಪುರಾವೆ. 2023ರಲ್ಲಿ ಐದು ಮಂದಿ ಸೈನಿಕರ ಸಾವಿಗೆ ಕಾರಣವಾಗಿದ್ದ ಸೇನಾ ಟ್ರಕ್ ಮೇಲಿನ ದಾಳಿ ಘಟನೆಯಲ್ಲೂ ಈತ ಷಾಮೀಲಾಗಿದ್ದ. ಆದರೆ ಮುಂದಿನ ಎರಡು ವರ್ಷ ಕಾಲ ಸುಮ್ಮನಿದ್ದ. ಘಟನೆಯಲ್ಲಿ ಷಾಮೀಲಾದ ಇತರ ಇಬ್ಬರು ಪಾಕಿಸ್ತಾನಿ ಉಗ್ರರ ಬಗ್ಗೆ ಮೂಲಗಳು ಗುರುತು ಬಹಿರಂಗಪಡಿಸಿಲ್ಲ.