ಪಾಕಿಸ್ತಾನ ಏಜೆಂಟರಿಗೆ ಮಾಹಿತಿ ನಿವೃತ್ತಿ ಯೋಧ ಅಜಯ್ ಸಿಂಗ್ , ರಶ್ಮನಿ ಪಾಲ್ ಬಂಧನ
ಸಾಂದರ್ಭಿಕ ಚಿತ್ರ
ಅಹ್ಮದಾಬಾದ್: ಭಾರತೀಯ ಸೇನಾ ಸಂಸ್ಥೆಗಳು ಹಾಗೂ ಸಿಬ್ಬಂದಿ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನ ಏಜೆಂಟರಿಗೆ ರವಾನಿಸುತ್ತಿದ್ದ ಆರೋಪದಲ್ಲಿ ಮಾಜಿ ಸೈನಿಕ ಹಾಗೂ ಮಹಿಳೆಯೊಬ್ಬರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುರುವಾರ ಬಂಧಿಸಿದೆ.
ಬಿಹಾರ ಮೂಲದ ಮಾಜಿ ಸುಬೇದಾರ್ ಅಜಯ್ ಕುಮಾರ್ ಸಿಂಗ್ (47)ನನ್ನು ಗೋವಾದಲ್ಲಿ ಹಾಗೂ ಉತ್ತರಪ್ರದೇಶ ಮೂಲದ ರಶ್ಮನಿ ಪಾಲ್(35)ಳನ್ನು ಕೇಂದ್ರ ಆಡಳಿತ ಪ್ರದೇಶ ಡಾಮನ್ ಯಲ್ಲಿ ಬಂಧಿಸಲಾಗಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದೆ.
ಅಜಯ್ ಕುಮಾರ್ ಸಿಂಗ್ 2022ರಲ್ಲಿ ನಾಗಾಲ್ಯಾಂಡ್‌ನ ಧಿಮಾಪುರದಲ್ಲಿ ಭಾರತೀಯ ಸೇನೆಯ ಸುಬೇದಾರ್ ಆಗಿದ್ದ. ಈ ಸಂದರ್ಭ ಅಂಕಿತಾ ಶರ್ಮಾ ಎಂಬ ಹೆಸರಿಲ್ಲಿ ಪಾಕಿಸ್ತಾನದ ಬೇಹುಗಾರಿಕೆ ಅಧಿಕಾರಿಯೊಬ್ಬರು ಆತನನ್ನು ಬಲೆಗೆ ಬೀಳಿಸಿಕೊಂಡಿದ್ದರು. ಅಜಯ್ ಕುಮಾರ್ ಸಿಂಗ್‌ನೊಂದಿಗೆ ಈ ಅಧಿಕಾರಿ ನಿರಂತರ ಸಂಪರ್ಕದಲ್ಲಿದ್ದಳು.
ಸೇನೆಯಿಂದ ನಿವೃತ್ತನಾದ ಬಳಿಕ ಸಿಂಗ್ ಗೋವಾದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ಸಂದರ್ಭ ಪಾಕಿಸ್ತಾನದ ಬೇಹುಗಾರಿಕಾ ಅಧಿಕಾರಿ ಸಿಂಗ್‌ನ ನಂಬಿಕೆ ಗಳಿಸಿದ್ದಳು ಹಾಗೂ ಭಾರತೀಯ ಸೇನೆಯ ರೆಜಿಮೆಂಟ್‌ನ ಚಲನವಲನ, ಮುಖ್ಯ ಸೇನಾಧಿಕಾರಿಗಳ ವರ್ಗಾವಣೆ ಕುರಿತು ಮಾಹಿತಿ ನೀಡುವಂತೆ ಕೋರಿದ್ದಳು. ಅವರ ಮನವಿಯಂತೆ ಸಿಂಗ್ ಪಠ್ಯ, ಫೋಟೊ ಹಾಗೂ ವೀಡಿಯೊಗಳ ರೂಪದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎಂದು ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ.
ಆ ಬೇಹುಗಾರಿಕಾ ಅಧಿಕಾರಿ ಸಿಂಗ್‌ನ ಮೊಬೈಲ್ ಫೋನ್‌ಗೆ ಟ್ರೋಜನ್ ಮಾಲ್‌ವೇರ್ ಫೈಲ್ ಕಳುಹಿಸಿದ್ದಳು. ಅದನ್ನು ಸೇವ್ ಮಾಡುವಂತೆ ಹಾಗೂ ಅಳವಡಿಸುವಂತೆ ಸೂಚನೆ ನೀಡಿದ್ದಳು. ಇದರಿಂದ ಅತಿಸೂಕ್ಷ್ಮ ಮಾಹಿತಿಗಳನ್ನು ವ್ಯಾಟ್ಸ್ ಆ್ಯಪ್ ಮೂಲಕ ಹಂಚಿಕೊಳ್ಳುವ ಅಗತ್ಯತೆ ಇಲ್ಲ. ಮಾಲ್‌ವೇರ್ ಸಿಂಗ್ ಮೊಬೈಲ್‌ನಿಂದ ಮಾಹಿತಿಯನ್ನು ಪಡೆದುಕೊಳ್ಳಲು ಅವಕಾಶ ನೀಡುತ್ತದೆ ಎಂದು ಅವರು ತಿಳಿಸಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.
ರಶ್ಮನಿ ಪಾಲ್ ಕುರಿತ ಪ್ರಶ್ನೆಗೆ ಉತ್ತರಿಸಿದ ಎಟಿಎಸ್ ಅಧಿಕಾರಿಗಳು, ರಶ್ಮನಿ ಪಾಲ್ ಹಣಕ್ಕಾಗಿ ಪಾಕಿಸ್ತಾನದ ಏಜೆಂಟರಾದ ಅಬ್ದುಲ್ ಸತ್ತಾರ್ ಹಾಗೂ ಖಾಲಿದ್ ಪರವಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದಳು. ಅಬ್ದುಲ್ ಸತ್ತಾರ್ ಹಾಗೂ ಖಾಲಿದ್ ನಿರ್ದೇಶನದಂತೆ ಆಕೆ ಪ್ರಿಯಾ ಠಾಕೂರ್ ಎಂಬ ನಕಲಿ ಗುರುತು ಸೃಷ್ಟಿಸಿದ್ದಳು. ಬಳಿಕ ಭಾರತೀಯ ಸೇನೆಯ ಸಿಬ್ಬಂದಿಯೊಂದಿಗೆ ಗೆಳೆತನ ಮಾಡಿಕೊಂಡಳು. ಅವರಿಂದ ಪಡೆದುಕೊಂಡ ರಹಸ್ಯ ಸೇನಾ ಮಾಹಿತಿಯನ್ನು ಸತ್ತಾರ್ ಹಾಗೂ ಖಾಲಿದ್‌ಗೆ ರವಾನಿಸುತ್ತಿದ್ದಳು ಎಂದು ಅವರು ತಿಳಿಸಿದ್ದಾರೆ.
ನಿರ್ದಿಷ್ಟ ಸೇನಾ ಘಟಕಗಳು, ಅವರ ಸಮರಾಭ್ಯಾಸಗಳು ಹಾಗೂ ಚಲನವಲನಗಳ ಕುರಿತು ಮಾಹಿತಿ ಸಂಗ್ರಹಿಸಲು ಪಾಕಿಸ್ತಾನ ಏಜೆಂಟರು ಪಾಲ್‌ಗೆ ಸೂಚಿಸಿದ್ದರು. ಪಾಕಿಸ್ತಾನದ ಮೊಬೈಲ್ ಸಂಖ್ಯೆ ಮೂಲಕ ಪಾಲ್ ನೇರವಾಗಿ ಅಬ್ದುಲ್ ಸತ್ತಾರ್‌ನೊಂದಿಗೆ ಸಂಪರ್ಕದಲ್ಲಿದ್ದಳು. ಹಣ ಸ್ವೀಕರಿಸಲು ಹಾಗೂ ರವಾನಿಸಲು ಆಕೆ ಬ್ಯಾಂಕ್‌ನಲ್ಲಿ ಹೊಸ ಖಾತೆ ತೆರೆದಿದ್ದಳು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.